ಜು.೨೯ ರಿಂದ ದಿವ್ಯಪಥ ಲೋಕಹಿತ ಶ್ರಾವಣಮಾಸದ ಪ್ರವಚನ 

ದಾವಣಗೆರೆ.ಜು.೨೬: ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ ಹಾಗೂ ಶಿವಯೋಗಾಶ್ರಮ ವತಿಯಿಂದ ಇದೇ ಜುಲೈ ೨೯ ರ  ಶುಕ್ರವಾರದಿಂದ ಆಗಸ್ಟ್ ೨೮ ರವರೆಗೆ ಅಥಣಿ ಶಿವಯೋಗಿಗಳ ಜೀವನ ದರ್ಶನ ಕುರಿತಾದ ಡಾ. ಮುರುಘಾ ಶರಣರು ರಚಿಸಿರುವ ‘ದಿವ್ಯಪಥ ಲೋಕಹಿತ’ ೧೧೨ ನೇ ವರ್ಷದ ಶ್ರಾವಣ ಮಾಸ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತಮಠ ಧರ್ಮದರ್ಶಿ ಸಮಿತಿ ಸದಸ್ಯ ಕುಂಟೋಜಿ ಚೆನ್ನಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಶ್ರಾವಣ ಮಾಸದ ತಿಂಗಳಪೂರ್ತಿ ಪ್ರತಿ ದಿನ ಸಂಜೆ ೬.೩೦ ಕ್ಕೆ ಪ್ರವಚನ ಕಾರ್ಯಕ್ರಮ ದೊಡ್ಡಪೇಟೆ ಬಸವಕೇಂದ್ರ ಶ್ರೀ ವಿರಕ್ತ ಮಠದಲ್ಲಿ ನಡೆಯಲಿದ್ದು, ಬ್ಯಾಡಗಿ ತಾ. ಕಲ್ಲೇದೇವರ ಹಿರೇಮಠದ ಶ್ರೀ ಕುಮಾರ ಶಾಸ್ತ್ರಿಗಳು ಪ್ರವಚನ ನಡೆಸಿಕೊಡಲಿದ್ದಾರೆ. ಪ್ರವಚನದ ನಂತರ ಮಹಾದಾಸೋಹವಿದೆ ಎಂದು ತಿಳಿಸಿದರು.ಜು.೨೯ ರ ಶುಕ್ರವಾರ ಸಂಜೆ ೬ ಗಂಟೆಗೆ  ಪ್ರವಚನ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ  ಬಸವಪ್ರಭು ಸ್ವಾಮಿಗಳು ವಹಿಸಲಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಎ. ಚನ್ನಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಮಹಾಪೌರ ಬಿ.ಜೆ. ಅಜಯ್ ಕುಮಾರ್, ರೈತ ಮೋರ್ಚಾ ಬಿಜೆಪಿ  ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಶ್ರೀ ಬಸವಪ್ರಭು ಸ್ವಾಮಿಗಳ ನೇತೃತ್ವದಲ್ಲಿ  ಆಗಸ್ಟ್ ೨ರಂದು ಬಸವಪಂಚಮಿ-‘ಹಾಲು ಕುಡಿಸುವ ಹಬ್ಬ’ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ ೮ ರಿಂದ ಒಂದು ವಾರಗಳ ಕಾಲ ದುಶ್ಚಟಗಳನ್ನು ಭಿಕ್ಷೆ ಬೇಡುವ ‘ಶ್ರೀ ಜಯದೇವ ಜೋಳಿಗೆ’ ಕಾರ್ಯಕ್ರಮ ನಡೆಸಲಾಗುವುದು ಎಂದರು. ಆಗಸ್ಟ್ ೨೨ ರಿಂದ  ೨೯ ರವರೆಗೆ  ವಿರಕ್ತ ಮಠದಲ್ಲಿ ಮಕ್ಕಳಿಗೆ ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ ಸ್ಪರ್ಧೆ ಹಾಗೂ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹಾಸಬಾವಿ ಕರಿಬಸಪ್ಪ, ಕಣಕುಪ್ಪಿ ಮುರುಗೇಶಪ್ಪ, ಲಂಬ, ಮುರುಗೇಶಪ್ಪ ಹಾಗೂ ಶರಣ ಬಸಪ್ಪ ಉಪಸ್ಥಿತರಿದ್ದರು.

Attachments area