ಜು.೨೫, ರಾಷ್ಟ್ರಪತಿಯಾಗಿ ಮುರ್ಮು ಪ್ರಮಾಣವಚನ ಸ್ವೀಕಾರ

ನವದೆಹಲಿ,ಜು.೨೩- ದೇಶದ ೧೫ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಜು. ೨೫ ಸೋಮವಾರದಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೂತನ ರಾಷ್ಟ್ರಪತಿಯವರಿಗೆ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್.ವಿ ರಮಣ ಅವರು ಪ್ರಮಾಣವಚನ ಬೋಧಿಸುವರು.
ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಬೆಳಿಗ್ಗೆ ೧೧ ಗಂಟೆಯ ಬದಲು ಮಧ್ಯಾಹ್ನ ೨ ಗಂಟೆಗೆ ಆರಂಭವಾಗಲಿವೆ.
ರಾಷ್ಟ್ರಪತಿ ಹುದ್ದೆಗೆ ಜು. ೧೮ ರಂದು ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಅವರು ವಿರೋಧ ಪಕ್ಷದ ಅಭ್ಯರ್ಥಿಯಾಗಿದ್ದ ಯಶ್ವಂತಸಿನ್ಹಾ ಅವರ ವಿರುದ್ಧ ಜಯಗಳಿಸಿ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಹಾಲಿ ರಾಷ್ಟ್ರಪತಿ ರಾಮ್‌ನಾಥ್‌ಕೋವಿಂದ್ ಅವರ ಅವಧಿ ಜು.೧೪ಕ್ಕೆ ಮುಗಿಯಲಿದ್ದು, ೨೫ ರಂದು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಪದಗ್ರಹಣ ಮಾಡುವರು.
ಗಣ್ಯರು ಭಾಗಿ
ನೂತನ ರಾಷ್ಟ್ರಪತಿಗಳ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಸೇರಿದಂತೆ ಕೇಂದ್ರದ ಸಚಿವರುಗಳು, ಕಾಂಗ್ರೆಸ್ ನಾಯಕರುಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.

ರಾಷ್ಟ್ರಪತಿ ವೇತನ
ಭಾರತದ ರಾಷ್ಟ್ರಪತಿಗಳ ಮಾಸಿಕ ವೇತನ ೫ ಲಕ್ಷ ರೂ. ನಿಗದಿಪಡಿಸಲಾಗಿದೆ. ೨೦೧೬ರಲ್ಲಿ ೧.೦೫ ಲಕ್ಷದಿಂದ ೨೦೦ ಪಟ್ಟು ಹೆಚ್ಚಿಸಲಾಗಿತ್ತು. ಅವರು ಹುದ್ದೆಯಿಂದ ನಿವೃತ್ತಿಯಾದ ನಂತರ ೧.೦೫ ಲಕ್ಷ ರೂ. ಪಿಂಚಣಿ ದೊರೆಯಲಿದೆ.
ರಾಷ್ಟ್ರಪತಿಯ ಪತಿ-ಪತ್ನಿಗೆ ಮಾಸಿಕ ೩೦ ಸಾವಿರ ರೂ. ಸಚಿವಾಲಯದ ನೆರವು ಲಭಿಸುತ್ತದೆ. ರಾಷ್ಟ್ರಪತಿಗೆ ಉಚಿತ ವಸತಿ ಹಾಗೂ ವೈದ್ಯಕೀಯ ಚಿಕಿತ್ಸೆ, ಕಚೇರಿ ವೆಚ್ಚಗಳಿಗಾಗಿ ವಾರ್ಷಿಕ ೧ ಲಕ್ಷ ರೂ. ನೀಡಲಾಗುತ್ತದೆ.
ರಾಷ್ಟ್ರಪತಿ ಭವನ ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿದ್ದು, ಒಟ್ಟು ೨ ಲಕ್ಷ ಚದರ ಅಡಿ ಕಟ್ಟಡ ನಿರ್ಮಾಣದ ಪ್ರದೇಶವನ್ನು ಹೊಂದಿರುವ ಈ ಕಟ್ಟಡದಲ್ಲಿ ೩೪೦ ಕೊಠಡಿಗಳಿವೆ. ರಾಷ್ಟ್ರಪತಿ ನಿವೃತ್ತಿ ನಂತರ ಸುಸಜ್ಜಿತ ಬಾಡಿಗೆ ಮುಕ್ತ ಬಂಗಲೆ, ೨ ಉಚಿತ ಲ್ಯಾಂಡ್‌ಲೈನ್ ದೂರವಾಣಿ ಸಂಪರ್ಕ, ೧ ಮೊಬೈಲ್‌ಫೋನ್, ಐವರು ವೈಯಕ್ತಿಕ ಸಿಬ್ಬಂದಿಗಳು, ಸಿಬ್ಬಂದಿಗಳ ವೆಚ್ಚ ಭರಿಸಲು ವಾರ್ಷಿಕ ೬೦ ಸಾವಿರ ಹಾಗೂ ರೈಲು ಅಥವಾ ವಿಮಾನದಲ್ಲಿ ಓರ್ವ ಸಂಗಾತಿಯೊಂದಿಗೆ ಉಚಿತ ಪ್ರಯಾಣ ಮಾಡಬಹುದಾಗಿದೆ.