ಜು. ೨೩ ಬಂಡಾಯ ಸಾಹಿತ್ಯ ಸಮ್ಮೇಳನ

ದಾವಣಗೆರೆ, ಜು. ೨೦- ರಾಜ್ಯಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲಿ ಜು. ೨೩ ಮತ್ತು ೨೪ ರಂದು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಬಂಡಾಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಬಿ.ಎನ್. ಮಲ್ಲೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ದಾವಣಗೆರೆಯಲ್ಲಿ ೧೯೮೬ ರ ನಂತರ ಇದೇ ಮೊದಲ ಬಾರಿಗೆ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸುಧೀರ್ಘ ೩೬ ವರ್ಷಗಳ ನಂತರ ದಾವಣಗೆರೆಯಲ್ಲಿ ಜರುಗುತ್ತಿದೆ ಎಂದು ತಿಳಿಸಿದರು.
ಜು. ೨೩ ರ ಬೆಳಗ್ಗೆ ೧೦.೩೦ಕ್ಕೆ ಬಂಡಾಯ ಸಾಹಿತ್ಯದ ಹೆಸರಾಂತ ಚಿಂತಕ ಡಾ. ಜಿ. ರಾಮಕೃಷ್ಣ ಉದ್ಘಾಟಿಸುವರು. ಪ್ರೊ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಮಾವಳ್ಳಿ ಶಂಕರ್, ಬಿ.ಎಂ. ಹನೀಫ್, ಸುಕನ್ಯಾ, ಮಾರುತಿ, ಪ್ರೊ. ಸಿ.ವಿ ಪಾಟೀಲ್ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಉದ್ಘಾಟನೆ ಕಾರ್ಯಕ್ರಮದ ನಂತರ ಸಾಮಾಜಿಕ ಸಾಂಸ್ಕೃತಿಕ ಮೌಲ್ಯಗಳು ಮತ್ತು ಮಹಿಳೆ, ಕನ್ನಡ ಸಾಹಿತ್ಯದಲ್ಲಿ ಸಮಾನತೆ ಮತ್ತು ಸಹಿಷ್ಣುತೆ ವಿಷಯ ಕುರಿತಾದ ವಿಚಾರಗೋಷ್ಠಿ ನಡೆಯಲಿವೆ ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಎರಡನೇ ಬಾರಿಗೆ ನಡೆಯುತ್ತಿರುವ ಸಮ್ಮೇಳನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು. ಜು.೨೪ ರ ಭಾನುವಾರ ಮೂರು ಗೋಷ್ಠಿ ಮತ್ತು ಸಮಾರೋಪ ನಡೆಯಲಿದೆ. ಸಮಕಾಲೀನ ಸನ್ನಿವೇಶ, ಹೊಸ ಪೀಳಿಗೆಯ ನೋಟ, ಕರ್ನಾಟಕ ಜನ ಚಳವಳಿ ಹಾಗೂ ಶಿಕ್ಷಣ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಗೋಷ್ಠಿ ನಡೆಯಲಿವೆ ಎಂದು ತಿಳಿಸಿದರು.
ಸಂಜೆ ೫ ಕ್ಕೆ ಸಮಾರೋಪದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ ಸಮಾರೋಪ ನುಡಿಗಳಾಡುವರು. ವಿಶ್ರಾಂತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆ ವಹಿಸುವರು. ಡಾ. ಎಚ್. ವಿಶ್ವನಾಥ, ಭಕ್ತರಹಳ್ಳಿ ಕಾಮರಾಜ್ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಆರ್.ಜಿ. ಹಳ್ಳಿ ನಾಗರಾಜ್ ಬರೆದಿರುವ ಮತ್ತು ಬರಗೂರು ರಾಮಚಂದ್ರಪ್ಪ ಅವರ ಪುಸ್ತಕ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.