ಜು.೨೧ ಕ್ಕೆ ನರಗುಂದದಲ್ಲಿ ರೈತರ ಬೃಹತ್ ಸಮಾವೇಶ

ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೭; ನರಗುಂದ- ನವಲಗುಂದ  ೪೩ ನೇ ವರ್ಷದ ರೈತ ಹುತಾತ್ಮರ ದಿನಾಚರಣೆ ಪ್ರಯುಕ್ತ ಜು.೨೧ ರಂದು ಬೆಳಗ್ಗೆ ೧೧ ಕ್ಕೆ ನರಗುಂದದಲ್ಲಿ ರೈತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕುರುವ ಗಣೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವೇಳೆ ನಮ್ಮ ಬೇಡಿಕೆಗಳ ಈಡೇರಿಕೆಗೆ  ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜಿಲ್ಲೆಯಿಂದಲೂ ಜು.೨೧ ಕ್ಕೆ ಅನೇಕ ರೈತರು ನರಗುಂದಕ್ಕೆ  ಆಗಮಿಸಲಿದ್ದಾರೆ ಎಂದರು. ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಪರವಿದ್ದು ರೈತಸಂಘ ಸ್ವಾಗತಿಸುತ್ತದೆ ಆದರೆ ಗ್ಯಾರಂಟಿ ಅನುಷ್ಠಾನಕ್ಕಾಗಿ ಯಾವುದೇ ಹೊಸ ತೆರಿಗೆ ಹೇರಬಾರದು.ಅನ್ನ ಭಾಗ್ಯ ಯೋಜನೆಗೆ ಹೊರ ರಾಜ್ಯದಿಂದ ಅಕ್ಕಿ ಖರೀದಿ ಮಾಡುವುದು ಹಾಗೂ ಅಕ್ಕಿ ಬದಲು ಹಣ ನೀಡುವುದನ್ನು ರೈತ ಸಂಘ ಖಂಡಿಸುತ್ತದೆ ಎಂದರು.ರಾಜ್ಯದ ರೈತರು ಬೆಲಕೆದ ಅಕ್ಕಿ ಖರೀದಿಸಬೇಕು ಇಲ್ಲವಾದರೆ ರಾಗಿ,ಜೋಳ ನೀಡಿದರೆ ರಾಜ್ಯದ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.ರೈತರ ಉತ್ಪಾದನಾ ವೆಚ್ಚದ ಜೊತೆಗೆ ಡಾ.ಸ್ವಾಮಿನಾಥನ್ ವರದಿಯಂತೆ ಶೇ ೫೦ ರಷ್ಟು ಲಾಭಾಂಶ ಸೇರಿಸಿ ಬೆಲೆ ಕೊಡಬೇಕು.ಕಬ್ಬಿಗೆ ಕನಿಷ್ಠ ಟನ್ ಗೆ ೪೫೦೦ ರೂ ಬೆಲೆ ನಿಗಧಿ ಮಾಡಬೇಕು. ಮಹದಾಯಿ ಕಳಸ ಬಂಡೂರಿ ಯೋಜನೆ ಶೀಘ್ರದಲ್ಲೇ ಕಾರ್ಯಗತಗೊಳಿಸಬೇಕು.ರೈತ ವಿರೋಧಿ ೩ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು.ಕೇಂದ್ರ ಸರ್ಕಾರ ನಬಾರ್ಡ್ ನಿಂದ ರೈತರಿಗೆ ಮೊದಲಿನಂತೆ ಶೇ ೭೫ ಭಾಗ ಸಾಲ ಕೊಡಿಸಬೇಕು.ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು ಮತ್ತು ಅರಣ್ಯ ನೀತಿಯನ್ನು ಸರಳೀಕರಣ ಮಾಡಿ ರೈತರಿಗೆ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.ತುಂಗಾ ಡ್ಯಾಂ ಭರ್ತಿಯಾಗಿ ೨೦ ದಿನಗಳಾಗಿದೆ ಆದರೆ ಇಲ್ಲಿಯವರೆಗೂ ಅಚ್ಚುಕಟ್ಟು ವ್ಯಾಪ್ತಿಗೆ ನೀರುಕೊಟ್ಟಿಲ್ಲ.ಈಗಾಗಲೇ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ ಕೂಡಲೇ ನೀರು ಹರಿಸಬೇಕು ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮರುಳಸಿದ್ದಪ್ಪ, ಷಣ್ಮುಖಪ್ಪ, ಹೊನ್ನೂರು ಮುನಿಯಪ್ಪ,ಬೀರಪ್ಪ,ಅಣ್ಣಪ್ಪ,ಅಭಿಲಾಷ್ ಉಪಸ್ಥಿತರಿದ್ದರು.