ಜು. ೨೦, ಶ್ರೀಲಂಕಾ ನೂತನ ಅಧ್ಯಕ್ಷರ ಆಯ್ಕೆ

ಕೊಲೊಂಬೋ,ಜು.೧೭- ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾದ ನೂತನ ಅಧ್ಯಕ್ಷರ ಆಯ್ಕೆ ಇದೇ ೨೦ ರಂದು ನಡೆಯಲಿದೆ.
ಹೊಸ ಅಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಭಾರತದ ರಾಯಭಾರಿ ಗೋಪಾಲ್ ಬಾಗ್ಲೇ ಅವರು ಸ್ಪೀಕರ್ ಮಹೀಂದ ಯಪ ಅಬೇವಾರ್ದೇನಿಯಾ ಅವರನ್ನು ಭೇಟಿ ಮಾಡಿ ಭಾರತದಿಂದ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಶ್ರೀಲಂಕಾ ಸಂವಿಧಾನದ ಅಡಿಯಲ್ಲಿ ಪ್ರಜಾಸತ್ತಾತ್ಮಕಡಿ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಅನುಕೂಲವಾಗುವ ರೀತಿಯಲ್ಲಿ ನವದೆಹಲಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಶ್ರೀಲಂಕಾ ಸಂಸತ್ತಿನ ಸಭೆಗೂ ಮೊದಲು, ಕೊಲಂಬೊದಲ್ಲಿನ ನಡೆದ ಈ ಭೇಟಿಯಲ್ಲಿ “ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವ, ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗೆ ಬೆಂಬಲವನ್ನು ಭಾರತ ಮುಂದುವರಿಸುತ್ತದೆ” ಎಂದು ರಾಯಬಾರಿ ಗೋಪಾಲ್ ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿರುವ ಭಾರತೀಯ ರಾಯಬಾರಿ ಗೋಪಾಲ್ ಟ್ವಿಟ್ ಮಾಡಿ, ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಚೌಕಟ್ಟನ್ನು ಎತ್ತಿಹಿಡಿಯುವಲ್ಲಿ ಸಂಸತ್ತಿನ ಪಾತ್ರವನ್ನು ಶ್ಲಾಘಿಸಿದ್ದಾರೆ.