ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೭: ಅನ್ನಭಾಗ್ಯ ಜಾರಿಯಾಗಿ ೧೦ ವರ್ಷ ಕಳೆದ ಹಿನ್ನೆಲೆಯಲ್ಲಿ ಲೋಡಿಂಗ್ ಕಾರ್ಮಿಕರ ದಶಮಾನೋತ್ಸವ ಹಾಗೂ ಶ್ರಮಿಕರ ಹಕ್ಕೊತ್ತಾಯ ಸಮಾವೇಶವನ್ನು ಜುಲೈ ೧೦ ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಶ್ರಮಿಕ ಶಕ್ತಿ ಪ್ರಧಾನ ಕಾರ್ಯದರ್ಶಿ ಸತೀಶ್ ಅರವಿಂದ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೩ರಿಂದ ೪ ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದು, ಜಿಲ್ಲೆಯಲ್ಲಿ ೧೫೦ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಉದ್ಯೋಗ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸರ್ಕಾರದ ಪ್ರತಿನಿಧಿಗಳು ಭಾಗವಹಿಸಲಿದ್ದು, ಕಾರ್ಮಿಕ ಮುಖಂಡರು, ಹೈಕೋರ್ಟ್ ವಕೀಲ ಎಸ್. ಬಾಲನ್, ಪ್ರೊ. ಬಾಬು ಮ್ಯಾಥ್ಯೂ, ಡಾ. ಹೆಚ್.ವಿ. ವಾಸು ಇನ್ನಿತರ ಗಣ್ಯರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಸಮಾವೇಶದಲ್ಲಿ ಕೆಲಸದ ಭದ್ರತೆ ನೀಡಬೇಕು, ಕೆಲಸದ ವೇಳೆಯನ್ನು ೧೨ ಗಂಟೆಗೆ ಹೆಚ್ಚಿಸಿದ ಆದೇಶವನ್ನು ಮೊದಲಿನಂತೆ ೮ ಗಂಟೆಗೆ ಇಳಿಸಬೇಕು, ಮಹಾರಾಷ್ಟ್ರ ಮಾದರಿಯಲ್ಲಿ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಬೇಕು ಸೇರಿದಂತೆ ೭ ಹಕ್ಕೊತ್ತಾಯ ಗಳನ್ನು ಸಲ್ಲಿಸಲಾಗುವುದು ಎಂದರು.ಜುಲೈ ೧೦ ರ ಸಮಾವೇಶಕ್ಕೆ ಜಿಲ್ಲೆಯಿಂದ ೧೦೦ ರಿಂದ ೧೫೦ ಕಾರ್ಮಿಕರು ತೆರಳಲಿದ್ದಾರೆ ಎಂದು ಸತೀಶ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ, ಮುಖಂಡರಾದ ಅಶ್ಫಾಕ್, ಪವಿತ್ರ, ಆದಿಲ್ ಖಾನ್, ಅಕ್ಬರ್ ಅಲಿ, ವೆಂಕಟೇಶ್ ಉಪಸ್ಥಿತರಿದ್ದರು.