ಜುಲೈ 6ಕ್ಕೆ ನಗರಸಭೆಯ ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ30: ಹೊಸಪೇಟೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿ ಮಾಡಿ ಚುನಾವಣಾಧಿಕಾರಿಗಳು ಆದ ಹೊಸಪೇಟೆ ಉಪವಿಭಾಗದ ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಆದೇಶ ಹೊರಡಿಸಿದ್ದಾರೆ.
ಜುಲೈ 6 ರಂದು ಬೆಳಗ್ಗೆ 11 ರಿಂದ 1 ಗಂಟೆಯೊಳಗೆ ನಾಪಮತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1.30 ವರೆಗೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯುತ್ತದೆ. ಮಧ್ಯಾಹ್ನ 2 ಗಂಟೆ ಒಳಗೆ ನಾಮಪತ್ರ ಹಿಂಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2 ಗಂಟೆ ಬಳಿಕ ಚುನಾವಣೆ ಸಭೆ ನಡೆಯುತ್ತದೆ.
ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಈ ಹಿಂದೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಮಾಜಿ ಸಚಿವ ಆನಂದ ಸಿಂಗ್ ಪ್ರಭಾವದಿಂದ ನಗರಸಭೆಯ ಪಕ್ಷೇತರರು ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ನಗರಸಭೆ ಬಿಜೆಪಿ ತೆಕ್ಕೆಗೆ ಜಾರಿತ್ತು.
ಒಟ್ಟು 35 ನಗರಸಭೆ ಸದಸ್ಯರ ಸಂಖ್ಯೆ ಹೊಂದಿದ್ದು ಈ ಪೈಕಿ ಪಕ್ಷೇತರರು 12 ಸದಸ್ಯರು, ಕಾಂಗ್ರೆಸ್ 12 ಸ್ಥಾನಗಳಲ್ಲಿ, ಬಿಜೆಪಿ 10 ಮತ್ತು ಆಮ್ ಆದ್ಮಿ ಪಕ್ಷ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಪಕ್ಷೇತರರು ಹಾಗೂ ಆಮ್ ಆದ್ಮಿ ಬಿಜೆಪಿಯ ಸೇರ್ಪಡೆಯ ಹಿನ್ನೆಲೆಯಲ್ಲಿ ಬಿಜೆಪಿ ಸಂಖ್ಯಾಬಲ 23 ಇದೆ. ಹೀಗಾಗಿ ಬಿಜೆಪಿ ವರಿಷ್ಠರು ಯಾರನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೂಚಿಸುತ್ತಾರೋ ಕಾದು ನೋಡಬೇಕು ಅಥವಾ ಬಿಜೆಪಿ ಮಾಡಿದಂತೆ ತಂತ್ರಗಾರಿಕೆಯಿಂದ ಪಕ್ಷೇತರರನ್ನು ಕಾಂಗ್ರೆಸ್ ಸೇಳೆಯುತ್ತಾ ಕಾದನೋಡಬೇಕು.