ಜುಲೈ ೭ ರಂದು ಬಜೆಟ್ ಮಂಡನೆ

ದಾವಣಗೆರೆ,ಜೂ.೫:ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನ ಜು. ೩ ರಿಂದ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಜು. ೭ ರಂದು ಹೊಸ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ಗಾತ್ರದ ಬಗ್ಗೆ ಮಾಹಿತಿ ಕೊಡಲು ಅವರು ನಿರಾಕರಿಸಿದ್ದು, ಏಳು ದಿನಗಳ ಕಾಲ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ ಎಂಧು ಹೇಳಿದರು.
ಬಜೆಟ್ ತಯಾರಿಕಾ ಪೂರ್ವಭಾವಿ ಸಭೆ ಇನ್ನು ಆರಂಭಿಸಿಲ್ಲ. ಬಜೆಟ್ ಗಾತ್ರದ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಚುನಾವಣಾ ಪೂರ್ವ ಮಂಡಿಸಿದ ಬಜೆಟ್ ಗಾತ್ರ ೩,೩೦,೭೧೪ ಕೋಟಿ ರೂ. ನಷ್ಟಿತ್ತು ಎಂದು ಹೇಳಿದರು.ಸಾಮಾನ್ಯವಾಗಿ ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಜೆಟ್ ಮಂಡಿಸುವುದು ವಾಡಿಕೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಹೊಸ ಬಜೆಟ್ ಮಂಡನೆ ಮಾಡುವುದಾಗಿಯೂ ಪ್ರಕಟಿಸಿದ್ದರು.ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯರವರು, ಇದೇ ಮೊದಲ ಬಾರಿಗೆ ದಾವಣಗೆರೆಗೆ ಆಗಮಿಸಿದ ವೇಳೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಜೆಟ್ ಅಧಿವೇಶನ ನಡೆಸುವ ಸಂಬಂಧ ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ಅವರಿಗೂ ಮಾಹಿತಿ ರವಾನಿಸಿ ಒಪ್ಪಿಗೆ ಪಡೆಯಲಾಗುವುದು ಎಂದರು.
ರಾಜ್ಯದಲ್ಲಿ ಮುಂಗಾರು ಮಳೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರದಂತೆ ಮುನ್ನೆಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷಕ್ಕೆ ದಾವಣಗೆರೆ ಅದೃಷ್ಟದ ನೆಲ, ಆದ್ದರಿಂದ ಸಿದ್ದರಾಮಯ್ಯ ಅಧಿಕೃತ ಪ್ರವಾಸ ಕೈಗೊಂಡು ಜಿಲ್ಲಾಮಟ್ಟದ ಪ್ರಥಮ ಸಭೆ ನಡೆಸಲಿದ್ದಾರೆ.
ಇದಕ್ಕೂ ಮುನ್ನ ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜಿನ ಹೆಲಿಪ್ಯಾಡ್‌ಗೆ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಜಿಲ್ಲಾಡಳಿತ ವತಿಯಿಂದ ಭವ್ಯ ಸ್ವಾಗತ ನೀಡಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ವತಿಯಿಂದಲೂ ಮುಖ್ಯಮಂತ್ರಿಗಳಿಗೆ ಆತ್ಮೀಯ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಐಜಿಪಿ ಟಿ. ತ್ಯಾಗರಾಜ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯುತ್ ದರ ಏರಿಸಿಲ್ಲ
ವಿದ್ಯುತ್ ದರವನ್ನು ಸರ್ಕಾರ ಹೆಚ್ಚಳ ಮಾಡಿಲ್ಲ. ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಮಂಡಳಿ ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದಾವಣಗೆರೆಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರೆಗ್ಯೂಲೇಟರ್ ಪ್ರಕಾರ ದರ ಪರಿಷ್ಕರಣೆ ಮಾಡಲಾಗಿದೆ ಎಂದರು.

ಗೋ ಹತ್ಯೆ ನಿಷೇಧ ಸಂಪುಟದಲ್ಲಿ ಚರ್ಚೆ
ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ ಸ್ಪಷ್ಟೀಕರಣ ನೀಡಿ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
೧೯೬೪ರ ಕಾಯ್ದೆ ಪ್ರಕಾರ ೧೨ ವರ್ಷ ತುಂಬಿದ ರಾಸುಗಳು ಮತ್ತು ವ್ಯವಸಾಯಕ್ಕೆ ಅನುಕೂಲಕ್ಕೆ ಬಾರದ ರಾಸುಗಳನ್ನು ಮುಕ್ತಗೊಳಿಸಲಾಗಿತ್ತು. ಈ ಕಾನೂನು ೧೯೬೪ರಲ್ಲೇ ಆಗಿದೆ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ನಿರ್ಧರಿಸಲಾಗುವುದು ಎಂದರು.