ಜೂನ್ ೨೦ ರಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಅಕ್ಕಿ ಸಂಘರ್ಷ
ಬೆಂಗಳೂರು, ಜೂ.೧೬:ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಅವಶ್ಯಕತೆ ಇರುವಷ್ಟು ಅಕ್ಕಿ ನೀಡಲು ನಿರಾಕರಿಸಿರುವ ಧೋರಣೆಯನ್ನು ಖಂಡಿಸಿ ಈ ತಿಂಗಳ ೨೦ ರಂದು ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಪ್ರತಿಭಟನಾ ಧರಣಿ ನಡೆಸಲಿದೆ.ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭಾರತ ಆಹಾರ ನಿಗಮದಲ್ಲಿ ಅಕ್ಕಿ ದಾಸ್ತಾನು ಇದ್ದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಖರೀದಿಗೆ ಅವಕಾಶ ನೀಡುತ್ತಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ವಿರೋಧಿ ನಿಲುವಾಗಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇದೇ ತಿಂಗಳ ೨೦ ರಂದು ಮಂಗಳವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನಾ ಧರಣಿ ನಡೆಸಲಿದೆ ಎಂದರು.ಕೇಂದ್ರದಿಂದ ನಾವು ಉಚಿತವಾಗಿ ಅಕ್ಕಿ ಕೇಳುತ್ತಿಲ್ಲ. ಹಣ ನೀಡುತ್ತೇವೆ ಎಂದರೂ ಅಕ್ಕಿ ಕೊಡುತ್ತಿಲ್ಲ. ಇದು ಸರಿಯಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಈ ರೀತಿ ನಿಲುವು ತಾಳಿರುವುದು ಖಂಡನೀಯ. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದರು.ಚುನಾವಣಾ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೇಂದ್ರದ ಯೋಜನೆಗಳು ಸ್ಥಗಿತವಾಗಲಿವೆ ಎಂದು ಹೇಳಿದ್ದರು. ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದಾರೆ ಎಂದು ವ್ಯಂಗ್ಯವಾಡಿದ ಡಿ.ಕೆ. ಶಿವಕುಮಾರ್ ಅವರು, ಕೇಂದ್ರ ಅಕ್ಕಿ ಕೊಡದೇ ಇದ್ದರೂ ನಾವಂತೂ ಅನ್ನಭಾಗ್ಯ ಯೋಜನಯಡಿ ಅಕ್ಕಿಯನ್ನು ಜುಲೈ ೧ ರಿಂದ ವಿತರಿಸುವ ಕೆಲಸ ಮಾಡುತ್ತೇವೆ. ನುಡಿದಂತೆ ನಡೆಯುತ್ತೇವೆ ಎಂದರು.ಭಾರತ ಆಹಾರ ನಿಗಮದ ಅಧಿಕಾರಿಗಳು ರಾಜ್ಯಸರ್ಕಾರ ಬರೆದಿದ್ದ ಪತ್ರಕ್ಕೆ ಸ್ಪಂದಿಸಿ ಮೇ ೧೨ ರಂದು ಅಗತ್ಯ ಅಕ್ಕಿ ನೀಡಲು ಸಮ್ಮತಿಸಿ ಪತ್ರ ಬರೆದಿದ್ದಾರೆ. ಆದರೆ, ೧೩ ರಂದು ರಾಜ್ಯಗಳಿಗೆ ಅಕ್ಕಿ ನೀಡಲು ನಿರ್ಬಂಧ ವಿಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆ ಜಾರಿ ಸಂಬಂಧ ಬೆಂಗಳೂರಿನಲ್ಲಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಭಿವೃದ್ಧಿ, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದು ದ್ವೇಷದ ರಾಜಕಾರಣ. ಬಿಜೆಪಿ ಬಡವರಿಗೆ ದ್ರೋಹ ಮಾಡಿದೆ. ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ. ಕೇಂದ್ರದ ಈ ದುರಾಡಳಿತಕ್ಕೆ ಧಿಕ್ಕಾರ ಎಂದು ಅವರು ಹೇಳಿದರು.ಈ ತಿಂಗಳ ೨೧ ರಂದು ಕಾಂಗ್ರೆಸ್ ನಾಯಕರು ವರಿಷ್ಠರ ಬುಲಾವ್ ಮೇರೆಗೆ ದೆಹಲಿಗೆ ಹೋಗುತ್ತಿದ್ದೇವೆ. ಆ ಸಂದರ್ಭದಲ್ಲಿ ಕೇಂದ್ರದ ಸಚಿವರನ್ನು ಭೇಟಿ ಮಾಡುತ್ತೇವೆ ಎಂದ ಅವರು, ಪ್ರಧಾನಿ ಭೇಟಿ ಮಾಡುತ್ತೀರಾ ಎಂಬ ಬಗ್ಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ.ರಾಜ್ಯಕ್ಕೆ ಅಗತ್ಯ ಅಕ್ಕಿ ಕೊಡಿಸಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಎಲ್ಲ ಸಂಸದರಿಗೂ ಪತ್ರ ಬರೆದು ಮನವಿ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.