(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧:ರಾಜ್ಯದಲ್ಲಿ ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆ ಇಂದಿನಿಂದ ಜಾರಿಗೆ ಬಂದಿದ್ದು, ಜುಲೈ ೧೦ ರಿಂದ ಅಕ್ಕಿ ಬದಲು ಹಣ ಕೊಡುವ ಪ್ರಕ್ರಿಯೆ ಆರಂಭವಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜು. ೧ ರಿಂದ ಜಾರಿಯಾಗುತ್ತೆ. ಜು. ೧ ರಂದೇ ಹಣ ಕೊಡುತ್ತೇವೆ ಎಂದು ಹೇಳಿಲ್ಲ. ಜು. ೧೦ರ ನಂತರ ಅಕ್ಕಿ ಬದಲು ಹಣ ಕೊಡುವ ಕೆಲಸ ಮಾಡುತ್ತೇವೆ, ಜುಲೈ ತಿಂಗಳಲ್ಲೇ ಎಲ್ಲರಿಗೂ ಅಕ್ಕಿ ಬದಲು ಹಣ ನೀಡುವುದಾಗಿ ಹೇಳಿದರು.
ಗೃಹಜ್ಯೋತಿ ಯೋಜನೆಯೂ ಇಂದಿನಿಂದ ಜಾರಿಯಾಗಿದ್ದು, ಆಗಸ್ಟ್‌ನಲ್ಲಿ ಫಲಾನುಭವಿಗಳಿಗೆ ಬರುವ ವಿದ್ಯುತ್‌ಬಿಲ್ ಶೂನ್ಯ ಬಿಲ್ ಆಗುತ್ತದೆ. ೨೦೦ ಯುನಿಟ್‌ವರೆಗೂ ಉಚಿತ ವಿದ್ಯುತ್ ಎಂದು ಅವರು ಹೇಳಿದರು.ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಲು ಪ್ರಯತ್ನ ನಡೆಸಿವೆ. ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ಸಭೆ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಮೊದಲು ಅವರ ಒಳಜಗಳ ಸರಿಪಡಿಸಿಕೊಳ್ಳಲಿ ಎಂದರು.