ಜುಲೈಗೆ ೩೦ ಕೋಟಿ ಜನರಿಗೆ ಲಸಿಕೆ

ನವದೆಹಲಿ,ಜ.೬- ಕೋವಿಡ್-೧೯ ಲಸಿಕೆ ವಿತರಣೆಗೆ ದೇಶ ಸಜ್ಜಾಗಿದ್ದು ಜುಲೈ ವೇಳೆಗೆ ೩೦ ಕೋಟಿ ಜನರಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಜಗತ್ತಿನಲ್ಲೇ ಕೋವಿಡ್ ವಿರುದ್ಧದ ಹೋರಾಟದಲ್ಲಿ ಅತಿದೊಡ್ಡ ಲಸಿಕಾ ಕಾರ್ಯಕ್ರಮ ಇದಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಪೂರಕವಾಗಿ ದೇಶಾದ್ಯಂತ ೨೯ಸಾವಿರ ಶಿಥಲೀಕಕಣ ವ್ಯವಸ್ಥೆ ಸಿದ್ಧಪಡಿಸಲಾಗಿದೆ. ಎಲ್ಲ ರಾಜ್ಯಗಳು ಸೇರಿದಂತೆ ೧೨೫ ಜಿಲ್ಲೆಗಳಲ್ಲಿ ಡ್ರೈ ರನ್ ಕಾರ್ಯಕ್ರಮ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಲಸಿಕೆ ವಿತರಣೆಗೆ ದೇಶಾದ್ಯಂತ ನಾಲ್ಕು ಮುಖ್ಯ ಲಸಿಕೆ ಸಂಗ್ರಹ ಕೇಂದ್ರ ಹಾಗು ರಾಜ್ಯಮಟ್ಟದಲ್ಲಿ ೩೭ ಲಸಿಕಾ ಕೇಂದ್ರ ತೆರೆಯಲಾಗಿದ್ದು ಈ ಕೇಂದ್ರಗಳ ಮೂಲಕ ಆಯಾ ಜಿಲ್ಲೆಗಳಿಗೆ ಲಸಿಕೆಯನ್ನು ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಲಸಿಕೆಯನ್ನು ಜನರಿಗೆ ಯಾವಾಗ ಹಾಕಬೇಕು ಎನ್ನುವ ಕುರಿತು ಕೇಂದ್ರ ಸರ್ಕಾರ ಈ ಸಂಬಂಧ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಲಸಿಕೆ ರಫ್ತು ಮಾಡಲು ಯಾವುದೇ ನಿರ್ಬಂಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ದೇಶೀಯ ಲಸಿಕೆಯ ಬೇಡಿಕೆ ಪೂರೈಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ವಿಶ್ವದ ಅತಿ ದೊಡ್ಡ ಔಷಧ ತಯಾರಿಕಾ ದೇಶವಾಗಿರುವ ಭಾರತ, ಜಾಗತಿಕ ಬೇಡಿಕೆಗಳಿಗೆ ಅನುಗುಣವಾಗಿ ಹೆಚ್ಚಿನ ಹೂಡಿಕೆಯೊಂದಿಗೆ ಲಸಿಕೆ ತಯಾರಿ ಸಾಮರ್ಥ್ಯ ಹೆಚ್ಚಿಸಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.
ಜನವರಿ ೩ರಂದು ಭಾರತೀಯ ಪ್ರಧಾನ ಅವಶದ ನಿಯಂತ್ರಕ – ಡಿಸಿಜಿಐ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಕ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಹೈದರಾಬಾದ್ ಮೂಲದ ಭಾರತ್ ಭಯೋಟೆಕ್ ಅಭಿವೃದ್ಧಿ ಕೋವಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿತ್ತು.