ಜುಮನಾಳದ ವಿಠ್ಠಲ ಮಂದಿರದಲ್ಲಿ ಕಾರ್ತಿಕ ಏಕಾದಶಿ ಆಚರಣೆ

ವಿಜಯಪುರ, ನ.16- ಇಲ್ಲಿಗೆ ಸಮೀಪದ ಜುಮನಾಳ ಗ್ರಾಮದಲ್ಲಿರುವ ಶ್ರೀ ವಿಠ್ಠಲ-ರುಕ್ಮಾಯಿ ಮಂದಿರದಲ್ಲಿ ಕಾರ್ತಿಕ ಏಕಾದಶಿ ಪ್ರಯುಕ್ತ ಸೋಮವಾರದಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಪಂಢರಪುರ ಭಕ್ತರ ದಿಂಡಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದರು. ವಾರಕರಿ ಭಜನಾ ಮಂಡಳಿಗಳು ತಮ್ಮ ಸುಶ್ರಾವ್ಯವಾಗಿ ವಿಠೋಬನ ಸ್ತುತಿಸುವ ಹಾಡುಗಳನ್ನು ಹಾಡುವ ಮೂಲಕ ತಮ್ಮ ಭಕ್ತಿ ಭಾವ ಪ್ರದರ್ಶಿಸಿದರು.
ಬೆಳಿಗ್ಗೆಯಿಂದಲೇ ಸಾಗರೋಪಾದಿಯಲ್ಲಿ ದೇವಾಲಯಕ್ಕೆ ಬಂದು ಅಲಂಕೃತ ವಿಠೋಬಾ-ರುಕಮಾಯಿಯ ದರ್ಶನ ಪಡೆಯುತ್ತಿದ್ದುದು ಕಂಡು ಬಂದಿತು.
ಅದಕ್ಕೂ ಮುಂಚೆ ಬೆಳಿಗ್ಗೆ ಶ್ರೀ ಭಗವದ್ಗೀತಾ ಮಂಡಳಿಯ ಸದಸ್ಯರು ಸುಮಾರು ಒಂದು ಗಂಟೆಗಳ ಕಾಲ ಭಗವದ್ಗೀತೆಯನ್ನು ಪಠಿಸಿದರು.ಸಂಜೆ ವರೆಗೆ ಸಹಸ್ರಾರು ಭಕ್ತರು ಆಗಮಿಸಿ ವಿಠ್ಠಲನ ದರ್ಶನ ಪಡೆದು ಪುನೀತರಾದರು. ಮಹಿಳೆಯರು ಸಂಗೀತ ವಾದ್ಯಗಳಿಂದೊಡಗೂಡಿ ಸಂಗೀತ ಸೇವೆ ಮಾಡಿದರು.
ಆಗಮಿಸಿದ ಭಕ್ತಮಂಡಳಿಗೆಲ್ಲ ದೇವಾಲಯದ ಧರ್ಮದರ್ಶಿ ಕಿರಣಭಟ್ಟ ಜೋಶಿ(ಜುಮನಾಳಕರ) ಪರಿವಾರದವರು ಫಲಾಹಾರದ ವ್ಯವಸ್ಥೆ ಮಾಡಿದ್ದರು.
ಅರವಿಂದ ಜೋಶಿ, ವಿಲಾಸ ಜೋಶಿ, ಗಣಪತಿ ಜೋಶಿ, ಅಶೋಕ ದಿಕ್ಷಿತ, ಶಂಭು ಭಟ್ಟ ಜೋಶಿ, ಶಾಮಭಟ್ಟ ಜೋಶಿ, ಕಾರ್ತಿಕ ಜೋಶಿ, ಅರುಣ ಸೋಲಾಪುರಕರ, ಎಂ ಜಿ ಕುಲಕರ್ಣಿ, ಹಣಮಂತ ಗುಡಿ, ಅಶೋಕ ಪದಕಿ, ರಾಘು ಕುಲಕರ್ಣಿ, ಹರ್ಷಿತ ಗುಡಿ, ಗೌಡರ, ಶಂಕರ ಕುಲಕರ್ಣಿ( ಗಿರಗಾಂವಿ) ಮುಂತಾದವರು ಉಪಸ್ಥಿತರಿದ್ದರು.