ಜುಂತು ಹುಳು ನಿವಾರಣಾ ಅಭಿಯಾನ 

ಚಿತ್ರದುರ್ಗ.ಮಾ.೧೪:ಇದೇ ಮಾರ್ಚ್ 14 ರಿಂದ 25ರ ವರೆಗೆ ರಾಜ್ಯಾದ್ಯಂತ ಜಂತು ಹುಳು ನಿವಾರಣಾ ಅಭಿಯಾನ ಜರುಗಲಿದೆ. ಆರೋಗ್ಯ ಇಲಾಖೆ ನಿಯಮಾನುಸಾರ ಜಿಲ್ಲೆಯ 5.76 ಲಕ್ಷ ಮಕ್ಕಳಿಗೆ ಉಚಿತವಾಗಿ ಅಲ್ಬೆಂಡಜೋಲ್ ಮಾತ್ರ ವಿತರಣೆ ಮಾಡಿ ಶೇ.100 ರಷ್ಟು ಪ್ರಗತಿ ಸಾಧಿಸಿಸುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಜಂತು ಹುಳು ನಿವಾರಣಾ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಜಂತು ಹುಳು ನಿವಾರಣಾ ಅಭಿಯಾನದ ಕುರಿತಾದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಭಿಯಾನದ ಅಂಗವಾಗಿ 1 ರಿಂದ 19ನೇ ವಯಸ್ಸಿನ ಮಕ್ಕಳಿಗೆ ಜಂತುಹುಳು ಮಾತ್ರೆ ನೀಡಬೇಕು. ಹೀಗಾಗಿ ಅಂಗನವಾಡಿ, ಶಿಕ್ಷಣ, ಪಿಯು ಇಲಾಖೆಯಿಂದ ನಿಖರವಾಗಿ ಮಕ್ಕಳ ಸಂಖ್ಯೆಯನ್ನು ಪಡೆದುಕೊಳ್ಳಿ. ಐಟಿಐ, ಪಾಲಿಟೆಕ್ನಿಕ್ ಹಾಗೂ ಪ್ರಥಮ ವರ್ಷದ ಡಿಗ್ರಿ ವಿದ್ಯಾರ್ಥಿಗಳಿಗೂ ತಪ್ಪದೇ ಮಾತ್ರೆ ನೀಡಬೇಕು. ಶಾಲೆ ಬಿಟ್ಟ ಮಕ್ಕಳು, ಅಲೆಮಾರಿ ಮಕ್ಕಳಿಗಾಗಿ ವಿಶೇಷ ತಂಡಗಳನ್ನು ರಚಿಸಿ ಮಾತ್ರೆ ಹಂಚುವ ಕೆಲಸ ಮಾಡಬೇಕು. ಸಣ್ಣ ಹಂತದಲ್ಲೂ  ಸಹ ಯೋಜನೆ ರೂಪಿಸಿ ಅಭಿಯಾನ ಯಶಸ್ವಿಗೊಳಿಸುವಂತೆ ತಾಕೀತು ಮಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಯ 5.76 ಲಕ್ಷ ಮಕ್ಕಳ ಪೈಕಿ, 5.41 ಲಕ್ಷ ಮಕ್ಕಳಿಗೆ ಉಚಿತವಾಗಿ ಜಂತು ಹುಳು ಮಾತ್ರೆಗಳನ್ನು ವಿತರಿಸಲಾಗಿತ್ತು. ಜಿಲ್ಲೆಯಲ್ಲಿ ಶೇ.94 ರಷ್ಟು ಸಾಧನೆ ಮಾಡಲಾಗಿತ್ತು. ಜಿಲ್ಲೆಗೆ 6.34 ಲಕ್ಷ ಅಲ್ಬೆಂಡಜೋಲ್ ಮಾತ್ರೆ ಬುಧವಾರ ಬಂದು ಸೇರಲಿವೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಮಕ್ಕಳಿಗೆ ನಿಯಮಾನುಸಾರ ಮಾತ್ರೆ ವಿತರಣೆ ಮಾಡಲಿದ್ದಾರೆ. ತಾಲ್ಲೂಕುವಾರು ಸಭೆಗಳನ್ನು ನಡೆಸಿ ಮಾತ್ರೆ ಹಂಚಿಕೆ ಕ್ರಮ ಕೈಗೊಳ್ಳಲಾಗುವುದು. ದ್ವಿತೀಯ ಪಿ.ಯು.ಸಿ ಓದುವ ಮಕ್ಕಳಿಗೆ 23ನೇ ತಾರೀಕು ಇಂಗ್ಲೀಷ್ ಭಾಷಾ ಪರೀಕ್ಷೆ ನಡೆಯಲಿದೆ. ಅಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮುಗಿದ ನಂತರ ಮಾತ್ರೆಗಳನ್ನು ನೀಡಲು ಕ್ರಮಕೈಗೊಳ್ಳಲಾಗುವುದು. ಮಾರ್ಚ್ 31 ರಂದು ಪ್ರಥಮ ಪಿ.ಯು.ಸಿ ಮಕ್ಕಳ ಫಲಿತಾಂಶ ಬರಲಿದ್ದು, ಅಂದು ಮಕ್ಕಳಿಗೆ ಮಾತ್ರೆ ನೀಡಲು ಸಿದ್ದತೆ ನೆಡೆಸಲಾಗಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಾಖಲೆ ಅನುಸಾರ 1 ರಿಂದ 6 ವರ್ಷಗಳ 1.10 ಲಕ್ಷ ಮಕ್ಕಳು, ಶಿಕ್ಷಣ ಇಲಾಖೆಯ ಸಾಟ್ಸ್ ದಾಖಲೆ ಅನುಸಾರ 1 ರಿಂದ 10ನೇ ತರಗತಿ ಓದುತ್ತಿರುವ 2.55 ಲಕ್ಷ ಮಕ್ಕಳು ಇದ್ದಾರೆ.ದಡಾರ ಮುಕ್ತ ಭಾರತ: 2023ನೇ ವರ್ಷವನ್ನು ಭಾರತದಲ್ಲಿ ಮೀಸಲ್ಸ್ ಹಾಗೂ ರೂಬೆಲ್ಲಾ (ದಡಾರ) ಮುಕ್ತ ವರ್ಷವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಸಿಕಾ ಅಭಿಯಾನವನ್ನು ಸಹ ಆರಂಭಿಸಿದೆ. ಜಿಲ್ಲೆಯಲ್ಲಿ ಡಿಸೆಂಬರ್ 2022 ರ ಅಂತ್ಯಕ್ಕೆ 280 ಹಾಗೂ ಮಾರ್ಚ್ 2023ರ ವರೆಗೆ 139 ದಡಾರ ಪ್ರಕರಣಗಳು ಕಂಡುಬಂದಿವೆ. ಅಧಿಕಾರಿಗಳು ಈ ಕುರಿತು ನಿಗಾ ವಹಿಸುವಂತೆ ಆರ್.ಸಿ.ಹೆಚ್.ಅಧಿಕಾರಿ ರೇಣುಪ್ರಸಾದ್ ಸೂಚನೆ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೆಶಕಿ ಭಾರತಿ ಆರ್ ಬಣಕಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.