ಜುಂಜಪ್ಪ ದೇವರ ಆಶೀರ್ವಾದ ಪಡೆದ ರಾಜೇಶ್‌ಗೌಡ

ಸಿರಾ, ನ. ೧೪- ಕಾಡುಗೊಲ್ಲರ ಆರಾಧ್ಯ ದೈವ ಪುರಾಣ ಪ್ರಸಿದ್ಧ ಜುಂಜಪ್ಪ ದೇವರು, ಶ್ರದ್ಧೆ ಭಕ್ತಿಯಿಂದ ಆರಾಧಿಸಿದರೆ ಇಷ್ಟಾರ್ಥ ನೆರವೇರಿಸುವ ದೈವಶಕ್ತಿ ಹೊಂದಿರುವ ಶ್ರೀಕ್ಷೇತ್ರ ಜುಂಜಪ್ಪ ಗುಡ್ಡೆ ನನ್ನ ವಿಧಾನಸಭೆ ಕ್ಷೇತ್ರದಲ್ಲಿರುವುದು ಪುಣ್ಯ. ಸಾಮಾನ್ಯರಂತೆ ಸಹಸ್ರಾರು ಗೋವುಗಳಿಗೆ ಮೇವು ನೀಡಿ ರಕ್ಷಣೆ ಮಾಡುವುದರ ಜತೆಗೆ ಜನಪದ ಸಂಸ್ಕೃತಿಗೆ ಹೆಚ್ಚು ಮೆರಗು ನೀಡುವ ಮೂಲಕ ಸಾಂಸ್ಕೃತಿಕ ವೀರ ಜುಂಜಪ್ಪ ತನ್ನಲ್ಲಿರುವ ಮುಗ್ದತೆಯಿಂದಲೇ ದೈವ ಶಕ್ತಿ ಪಡೆದುಕೊಂಡಿದ್ದರು ಎಂದು ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಹೇಳಿದರು.
ತಾಲ್ಲೂಕಿನ ಗೌಡಗೆರೆ ಹೋಬಳಿಯ ಶ್ರೀಕ್ಷೇತ್ರ ಜುಂಜಪ್ಪ ಗುಡ್ಡೆಗೆ ಭೇಟಿ ನೀಡಿ ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಸಣ್ಣ ನೀರಾವರಿ ಇಲಾಖೆ ಮುಖ್ಯ ಕಾರ್ಯದರ್ಶಿಯವರಿಗೆ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ನಿಟ್ಟಿನಲ್ಲಿ ಕೆರೆ ಆವರಣಗಳ ಸ್ವಚ್ಚತೆ ಅಲ್ಲದೆ ಯಾವುದೇ ತೊಂದರೆಯಾಗದಂತೆ ಕಾಲುವೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಹೇಳಿದ್ದು, ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನೀರು ಹರಿಸಲಿದೆ. ಇದಲ್ಲದೆ ಸಿರಾ ಗುಡಿಸಲು ಮುಕ್ತ ತಾಲ್ಲೂಕು ಮಾಡುವ ಗುರಿ ಹೊಂದಿದ್ದು, ವಸತಿ ಸಚಿವರಿಗೆ ಮನವಿ ಮಾಡಿದ್ದು ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ಗುರಿ ಹೊಂದಲಾಗಿದೆ ಎಂದರು.
ಅಭಿನಂದನಾ ಸಮಾರಂಭಗಳು ಹೆಚ್ಚು ಆಯೋಜನೆ ಮಾಡಿ ಹಾರ ಪಟಾಕಿಗಳಿಗೆ ವ್ಯರ್ಥವಾಗಿ ಹಣ ಖರ್ಚು ಮಾಡುವುದು ಬೇಡ. ನಾನೇ ಗ್ರಾಮಗಳಿಗೆ ಭೇಟಿ ನೀಡಿ ನಿಮ್ಮ ಅಣ್ಣ, ತಮ್ಮ, ಬಂಧುವಾಗಿ ಸಮಸ್ಯೆಗಳನ್ನು ಕೇಳಿ ಹಂತ ಹಂತವಾಗಿ ಬಗೆಹರಿಸುವಂತಹ ಪ್ರಾಮಾಣಿಕ ಸೇವೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಹೊಸೂರು ಪ್ರಕಾಶ್, ಲಕ್ಕನಹಳ್ಳಿ ಮಂಜುನಾಥ್, ಕೆ. ದೊಡ್ಡಯ್ಯ, ಕೊಟ್ಟ ಶ್ರೀನಿವಾಸ್, ಶಿವು ಸ್ನೇಹಪ್ರಿಯ, ತಾವರೆಕೆರೆ ದೇವರಾಜು, ಎಂ.ಸಿ. ಈರಣ್ಣ, ಕೋಲಾಟ ಚಿತ್ತಪ್ಪ, ಬಡೀರಪ್ಪ, ಹನುಮಂತ, ವೆಂಕಟೇಶ್, ಶೇಖರ್ ಮತ್ತಿತರರು ಉಪಸ್ಥಿತರಿದ್ದರು.