ಜೀವ ಹಿಂಡುತ್ತಿದೆ ಸೋಂಕು, ಸಾವು

ದೇವದುರ್ಗ.ಏ.೨೯-ಕರೊನಾ ಎರಡನೇ ಅಲೆ ಅಕ್ಷರಶಃ ತಾಲೂಕಿನ ಜೀವಹಿಂಡುತ್ತಿದೆ. ಇಷ್ಟು ದಿನ ಸೋಂಕಿಗೆ ಸೀಮಿತವಾಗಿದ್ದ ಮಹಾಮಾರಿ ಕರೊನಾ ಈಗ ಸೋಂಕಿತರನ್ನು ಬಲಿ ಪಡೆಯುತ್ತಿದೆ. ಎರಡನೇ ಅಲೆಗೆ ತಾಲೂಕಿನಲ್ಲಿ ಏಳಕ್ಕೂ ಹೆಚ್ಚು ರೋಗಿಗಳು ಬಲಿಯಾಗಿದ್ದಾರೆ ಎನ್ನಲಾಗಿದೆ.
ತಾಲೂಕಿನಲ್ಲಿ ಹೊಸ ಪ್ರಕರಣಗಳು ನಿತ್ಯವೂ ಶತಕ ದಾಟುತ್ತಿದ್ದು, ಸೋಂಕಿತರ ಸಂಖ್ಯೆ ಸಾವಿರ ಗಟಿ ಸಮೀಪ ಬಂದು ತಲುಪಿದೆ. ಹೊಸ ಸಾವಿನ ಪ್ರಕರಣಗಳು ಬರುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಮಾತ್ರವಲ್ಲ ಜನ ಸಾಮಾನ್ಯರನ್ನೂ ಬೆಚ್ಚಿ ಬೀಳಿಸಿದೆ.
ವಾರದ ಹಿಂದೆ ದೇವರಗುಂಡಗುರ್ತಿ ಗ್ರಾಮದಲ್ಲಿ ದಂಪತಿ ಕರೊನಾಗೆ ಬಲಿಯಾಗಿದ್ದರು. ಕೆಲ ದಿನಗಳ ಹಿಂದೆ ಕೆ. ಇರಬಗೇರಾ ಗ್ರಾಮದಲ್ಲಿ ಒಬ್ಬರು, ನಂತರ ಅಲ್ಲಿನ ಶಾಲಾ ಶಿಕ್ಷಕಿಯಾಗಿದ್ದ ೫೦ವರ್ಷದ ಮಹಿಳೆ ಹಾಗೂ ೩೦ವರ್ಷದ ಅವರ ಮಗ ಸೋಂಕಿಗೆ ಬಲಿಯಾಗಿದ್ದಾರೆ. ಇವರು ಕೆಲ ದಿನಗಳ ಹಿಂದೆ ಸೋಂಕಿಗೆ ತುತ್ತಾಗಿದ್ದು, ಕೊತ್ತದೊಡ್ಡಿಯಲ್ಲಿ ಹೊಮ್ ಕ್ವಾರಂಟೈನ್ ಆಗಿದ್ದರು ಎನ್ನಲಾಗಿದೆ.
ಸೋಮವಾರ ಪಟ್ಟಣದ ಮೂವರು ವ್ಯಕ್ತಿಗಳು ಮಹಾಮಾರಿ ಕರೊನಾಗೆ ಬಲಿಯಾಗಿದ್ದಾರೆ. ಒಂದೇ ಕುಟುಂಬದ ಇಬ್ಬರು, ಇನ್ನೊಬ್ಬ ವಯಷ್ಕರು ಬಲಿಯಾಗಿದ್ದಾರೆ. ಇದಲ್ಲದೆ ೧೦ಕ್ಕೂ ಹೆಚ್ಚು ಜನರು ರಾಯಚೂರಿನ ರಿಮ್ಸ್, ಒಪೆಕ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನ ಜತೆಗೆ ಸಾವಿನ ಪ್ರಕರಣಗಳು ಪತ್ತೆಯಾಗುತ್ತಿರುವುದು ತಾಲೂಕನ್ನು ಬೆಚ್ಚಿಬೀಳಿಸಿದೆ.
ಮಂಗಳವಾರ ೧೫೭ಪಾಸಿವಿಟ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ೮೧೭ಕ್ಕೆ ತಲುಪಿದೆ. ಇದರಲ್ಲಿ ೧೦೨ಜನರು ಗುಣಮುಖರಾಗಿದ್ದಾರೆ. ಕರೊನಾ ವ್ಯಾಕ್ಸಿನ್ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದು, ಸೋಂಕು ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ೬೦ಸಾವಿರ ಜನರಿಗೆ ವ್ಯಾಕ್ಸಿನ್ ಹಾಕುವ ಗುರಿಹಾಕಿಕೊಂಡಿದ್ದ ಆರೋಗ್ಯ ಇಲಾಖೆ ಕೇವಲ ಶೇ.೧೫ರಷ್ಟು ಗುರಿ ಸಾಧಿಸಿದೆ.

ಕೋಟ್=====
ತಾಲೂಕಿನ ಕರೊನಾ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿದ್ದು, ಇಂದು ೧೫೭ಕೇಸ್ ಬಂದಿವೆ. ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ನಾನಾ ಕಾರಣದಿಂದ ಮೂವರು ಮೃತಪಟ್ಟಿದ್ದಾರೆ. ರೋಗ ತಡೆಗೆ ಕಠಿಣಕ್ರಮ ಕೈಗೊಳ್ಳಲಾಗುತ್ತಿದೆ. ವ್ಯಾಕ್ಸಿನ್ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ.
| ಡಾ.ಬನದೇಶ್ವರ
ಟಿಎಚ್‌ಒ