ಜೀವ ಹಾನಿ: ಕುಟುಂಬಸ್ಥರಿಗೆ ಸಚಿವ ಪ್ರಭು ಚವ್ಹಾಣ ಧನಸಹಾಯ

ಬೀದರ:ಜು.16:ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಜುಲೈ 15ರಂದು ಔರಾದ ಮತ್ತು ಕಮಲನಗರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಪ್ರವಾಸದ ಕೈಗೊಂಡು ಜೀವ ಹಾನಿ ಹಾಗೂ ಮತ್ತಿತರೆ ಕಾರಣಗಳಿಂದ ನೊವಿನಲ್ಲಿರುವ ಕುಟುಂಬಸ್ಥರಿಗೆ ಧನಸಹಾಯಮಾಡಿದರು.

ನಾಗೂರ(ಬಿ) ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮದಲ್ಲಿ ಇತ್ತೀಚೆಗೆ ಹಳ್ಳದಲ್ಲಿ ಮುಳುಗಿ ಮರಣ ಹೊಂದಿದ ಸುಮನಾಬಾಯಿ ಬಾಬುರೆಡ್ಡಿ ಅವರ ಅವಲಂಬಿತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಅವರ ಸಮಸ್ಯೆಗಳನ್ನು ಸಮಚಿತ್ತದಿಂದ ಆಲಿಸಿದರು. ನಾನು ಸದಾ ನಿಮ್ಮೊಂದಿರುತ್ತೇನೆ. ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದು ಧೈರ್ಯ ಹೇಳಿದರಲ್ಲದೇ ವೈಯಕ್ತಿಕ ಧನಸಹಾಯ ಮಾಡಿದರು.

ಕಮಲನಗರ ತಾಲ್ಲೂಕಿನ ಹಾಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇತ್ತೀಚೆಗೆ ನದಿಯಲ್ಲಿ ಮುಳುಗಿ ಮರಣ ಹೊಂದಿದ್ದ ನರಸಿಂಗ್ ನವನಾಥ ಎಂಬುವವರ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರಲ್ಲದೇ ವೈಯಕ್ತಿಕ ಧನಸಹಾಯ ಮಾಡಿದರು.

ಇಲಾಖೆಯಿಂದ ಮಳೆಹಾನಿಯ ಕುರಿತು ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡ ನಂತರ ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದ ಸಚಿವರು, ಸದರಿ ಕುಟುಂಬಸ್ಥರಿಗೆ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗಾಯಾಳುಗಳ ಆರೋಗ್ಯ ವಿಚಾರಣೆ: ಇತ್ತೀಚೆಗೆ ಯಾದಗಿರಿ ಜಿಲ್ಲೆಗೆ ಪ್ರಯಾಣ ಮಾಡುತ್ತಿರುವಾಗ ಮಾರ್ಗ ಮಧ್ಯೆ ಸಂಗಮ ಬ್ರಿಜ್ ಹತ್ತಿರ ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತಕ್ಕೆ ಒಳಗಾದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು. ಜುಲೈ 15ರಂದು ಹಾಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗಾಯಾಳುಗಳ ಕುಟುಂಬದವರನ್ನು ಭೇಟಿ ಮಾಡಿ, ಅಪಘಾತಕ್ಕೆ ಸಿಲುಕಿ ಚಿಕಿತ್ಸೆ ಪಡೆಯುತ್ತಿರುವ ಮಾರುತಿ ಬಿರಾದಾರ ಹಾಗೂ ಸಚಿನ ಬಿರಾದಾರ ಅವರ ಆರೋಗ್ಯ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ವೈಯಕ್ತಿಕ ಧನಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಔರಾದ ತಹಸೀಲ್ದಾರರಾದ ಅರುಣಕುಮಾರ ಕುಲಕರ್ಣಿ, ಕಮಲನಗರ ತಹಸೀಲ್ದಾರ ರಮೇಶ ಪೆದ್ದೆ, ಔರಾದ ಇಓ ಬೀರೇಂದ್ರ ಸಿಂಗ್, ಕಮಲನಗರ ಇಓ ಸೈಯ್ಯದ್ ಫಜಲ್ ಮಹಮ್ಮೂದ್, ಮುಖಂಡರಾದ ಸುರೇಶ ಭೋಸ್ಲೆ, ಶರಣಪ್ಪ ಪಂಚಾಕ್ಷರಿ, ಕೊಂಡಿಬಾ ಬಿರಾದಾರ, ಹಣಮಂತ ಸುರನಾರ, ಉದಯ, ಪ್ರದೀಪ ಪವಾರ, ಸಚಿನ್ ರಾಠೋಡ, ದಯಾನಂದ ಹಳ್ಳಿಖೇಡೆ, ದೊಂಢಿಬಾ ನರೋಟೆ ಹಾಗೂ ಇತರರು ಉಪಸ್ಥಿತರಿದ್ದರು.