ಜೀವ ಬೆದರಿಕೆಯಿದೆ ನಮಗೆ ರಕ್ಷಣೆ ಕೊಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.08: ತಮ್ಮ ತಂದೆ ದೇವರೆಡ್ಡಿ ಮಾಜಿ ಶಾಸಕ ಸೂರ್ಯನಾರಾಯಣರೆಡ್ಡಿ ಅವರೊಂದಿಗೆ ಪಾಲುದಾರರಾಗಿ ವ್ಯವಹಾರದ ಹಂಚಿಕೆ ಸಂಬಂಧ ನ್ಯಾಯಾಲಯದಲ್ಲಿ ದೂರಿನ ವಿಚಾರಣೆ ನಡೆಯುತ್ತಿದ್ದು ಪ್ರಕರಣವನ್ನು ಹಿಂಪಡೆಯುವಂತೆ ನಾರಾಯಣರೆಡ್ಡಿ ಅವರ ಪುತ್ರರಾದ ಭರತ್ ರೆಡ್ಡಿ, ಶರತ್ ರೆಡ್ಡಿ ಮತ್ತಿತರರು ನಮಗೆ ಜೀವ ಬೆದರಿಕೆ ಹಾಕುತ್ತಿದ್ದು ನಮಗೆ ರಕ್ಷಣೆ ಕೊಡಬೇಕೆಂದು ದಿವಂಗತ ದೇವರೆಡ್ಡಿ ಅವರ ಪುತ್ರಿಯರಾದ ಪೂರ್ಣಿಮ, ಅರುಣಾರೆಡ್ಡಿ ಅಳಿಯ ಸುನಿಲ್ ಕುಮಾರ್ ಅವರು ನಿನ್ನೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೂರ್ಣಿಮಾ ಮತ್ತು ಅರುಣಾರೆಡ್ಡಿ ಅವರು, ತಮ್ಮ ತಂದೆ ದೇವರೆಡ್ಡಿ ಮತ್ತು ನಾರಾಯಣರೆಡ್ಡಿ ಅವರು ವ್ಯವಹಾರದಲ್ಲಿ ಭಾಗಮಾಡಿ ಕೊಟ್ಟಿದ್ದಾರೆ ಎಂಬುದು ನಮಗೆ ಆದಾಯ ತೆರಿಗೆ ಇಲಾಖೆಯಿಂದ ನೋಟೀಸ್ ಬಂದ ಮೇಲೆ ತಿಳಿದಿದೆ. ಈ ಸಂಬಂಧ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ಕಳೆದ ವರ್ಷ ದೂರು ದಾಖಲಿಸಿದೆ. ಈ ಕೇಸನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಹಿಂದಕ್ಕೆ ಪಡೆಯದಿದ್ದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅದಕ್ಕಾಗಿ ನಮಗೆ ರಕ್ಷಣೆ ಕೊಡಿ ಎಂದಿದ್ದಾರೆ.
 ರಾಜಕೀಯ ಪ್ರೇರಿತ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾರಾ ಭರತ್ ರೆಡ್ಡಿ, ಇದೆಲ್ಲಾ ರಾಜಕೀಯ ಪ್ರೇರಿತವಾದುದು ನಾನು ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನಿಸುತ್ತಿರುವುದರಿಂದ ನನ್ನ ವಿರೋಧಿಗಳು ಅವರನ್ನು ಎತ್ತಿಕಟ್ಟಿ ನಮ್ಮ ಮೇಲೆ ವಿನಾಕಾರಣ ಆರೋಪ ಮಾಡಿಸುತ್ತಿದ್ದಾರೆ. ಅವರ ತಂದೆ ತೀರಿಕೊಂಡು ಎರಡು ದಶಕ ಆಗಿದೆ. ಈಗ ದೂರುತ್ತಿದ್ದಾರೆ. ಅಷ್ಟೇ. ವ್ಯವಹಾರದ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಹೆಚ್ಚಿನ ಪ್ರತಿಕ್ರಿಯೆ ನೀಡಲಾರೆ ಎಂದಿದ್ದಾರೆ.