ಜೀವ ಪಡೆದ ಕಾರಂಜಾ ಜಲಾಶಯ: ಕಾಲು ಭಾಗಕ್ಕೆ ತಲುಪಿದ ಜೀವಜಲ

ವಿಶೇಷ ವರದಿ: ಶಿವಕುಮಾರ ಸ್ವಾಮಿ

ಬೀದರ:ಸೆ.16: ನಾಡಿನ ಮುಕುಟಮಣಿ, ತೆಲಂಗಾಣಾ ಹಾಗೂ ಮಹಾರಾಷ್ಟ್ರದ ಮಧ್ಯದಲ್ಲಿರುವ ಗಡಿ ಜಿಲ್ಲೆ ಬೀದರ್‍ನ ಏಕೈಕ ಜಲಾಶಯ ಕಾರಂಜಾ ಡ್ಯಾಂ ವೆಂಟಿಲೇಟರ್‍ನಿಂದ ಪಾರಾಗಿದೆ ಎಂದು ನಿಟ್ಟುಸಿರು ಬಿಡಬೇಕಿದೆ.

2010ಕ್ಕಿಂತ ಮುಂಚೆ ಪ್ರತಿ ವರ್ಷ ಕಾರಂಜಾ ಡ್ಯಾಮ್ ಭರ್ತಿಯಾಗಿ ನದಿಗೆ ನೀರು ಬಿಡುವ ಸ್ಥಿತಿ ಇತ್ತು. ಆದರೆ ಅಲ್ಲೀಂದೀಚೆಗೆ ಡ್ಯಾಮ್ ಭರ್ತಿಯಾಗುವಷ್ಟು ಮಳೆಯಾಗುತ್ತಿಲ್ಲ. ಆದರೆ ಈ ವಾರದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಡ್ಯಾಮ್‍ನ ಕಾಲು ಭಾಗ ತುಂಬಿದ್ದು ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಈ ಹಿಂದೆ ಭಾಲ್ಕಿ ಹಾಲಿ ಶಾಸಕ ಈಶ್ವರ್ ಖಂಡ್ರೆ ಅವರು ಜಿಲ್ಲಾ ಉಸ್ತವಾರಿ ಸಚಿವರಿದ್ದಾಗ 2016ರಲ್ಲಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಬಾಗೀನ ಅರ್ಪಿಸಿದುಂಟು. ಅಂದಿನಿಂದ ಮತ್ತೆ ಡ್ಯಾಮ್ ಸದಾ ಖಾಲಿ ಇರುತ್ತಿದೆ. ಇತ್ತಿಚೀನ ಸಧಾರಣ ಮಳೆಯಿಂದಾಗಿ ಡ್ಯಾಮ್‍ನಲ್ಲಿ 7.691 ಪೈಕಿ 2.270 ಟಿ.ಎಮ್.ಸಿ ನೀರು ಸಂಗ್ರಹವಾಗಿದ್ದು ಒಂದು ವರ್ಷದ ವರೆಗೆ ಜಿಲ್ಲೆಯಾದ್ಯಂತ ಕೂಡಿಯುವ ನೀರಿಗೆ ಆಭಾವ ತಪ್ಪಲಿದೆ ಎಂದು ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರರಾದ ಆನಂದ್ ಪಾಟೀಲ ನಮ್ಮ ಪ್ರತಿನಿಧಿಯೊಂದಿಗೆ ಈ ವಿಷಯ ಹಂಚಿಕೊಂಡಿದ್ದಾರೆ.

ದುರ್ದೈವದ ಸಂಗತಿ ಎಂದರೆ ಕಳೆದ ಎರಡು ವರ್ಷಗಳಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗದಿದ್ದರೂ ಮಹಾರಾಷ್ಟ್ರದಿಂದ ನೀರು ಬಂದು ಅಲ್ಲಿಯ ಜಲಶಯಗಳು ಭರ್ತಿಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ವರ್ಷ ಯಾದಗಿರಿ, ಕಲಬುರಗಿ, ವಿಜಯಪೂರ, ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಸುರಿದು ಅಲ್ಲಿಯ ಜೀವನದಿಗಳೆಲ್ಲ ಭರ್ತಿಯಾಗಿವೆ. ಆದರೆ, ನಮ್ಮ ಜಿಲ್ಲೆಯ ಎಕೈಕ ಜೀವಜಲ ಕಾರಂಜಾ ಮಾತ್ರ ಕಳೆದ ನಾಲ್ಕು ವರ್ಷಗಳಿಂದ ಭರ್ತಿಯಾಗದೆ ಉಳಿದಿರುವುದು ವಿಪರ್ಯಾಸ.

ಮತ್ತೊಂದು ದುರ್ದೈವದ ಸಂಗತಿ ಎಂದರೆ ನಮ್ಮ ಜಿಲ್ಲೆಯಲ್ಲಿಯೇ ಹರಿಯುತ್ತಿರುವ ಮುಲ್ಲಾಮಾರಿ ಡ್ಯಾಮ್ ಭರ್ತಿಯಾಗಿದೆ, ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಿರಗ್ಯಾಳ, ಮಾಣಿಕೇಶ್ವರ್, ಲಖಣಗಾಂವ ಹಾಗೂ ಚಂದಾಪೂರ ಬ್ರೀಜ್ ಕಮ್ ಬ್ಯಾರೇಜ್‍ಗಳು ಸಹ ಭರ್ತಿಯಾಗಿವೆ. ದಾಡಗಿ ತೊರೆ, ಭಾಲ್ಕಿ ಕೆರೆ ಎಲ್ಲಭು ತುಂಬಿ ಹರಿಯುತ್ತಿವೆ. ಕಾಳಸರತುಗಾಂವನಲ್ಲಿ ಹಿಂದೆಂದೂ ಕಾಣದ ಮಳೆಯಾಗಿದೆ. ಹುಮನಾಬಾದ್ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾರಿ ಮಳೆಯಿಂದಾಗಿ ಬೋತಗಿಯಂತಹ ಕೆಲವು ಗ್ರಾಮಗಳ ಸಂಪರ್ಕ ಕಡಿದು ಹೋಗಿವೆ. ತೆಲಂಗಾಣಾದ ಕೆಲವು ಕಡೆ ಮಳೆಯಾಗಿದೆ. ಆದರೆ, ಕಾರಂಜಾ ಜಲಶಯಕ್ಕೆ ಹರಿದು ಬರುವ ಕೊತ್ತುರ್ ಬ್ಯಾರೇಜ್ ಆಸು ಪಾಸಿನ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಹೆಚ್ಚಾಗಿ ನೀರು ಬರುತ್ತಿಲ್ಲ. ಅದೇ ರೀತಿ ಕಾರಂಜಾ ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗದ ಕಾರಣ ಡ್ಯಾಮ್ ಭರ್ತಿಯಾಗುತ್ತಿಲ್ಲವೆಂದು ಆನಂದ ಪಾಟೀಲ ಹೇಳುತ್ತಾರೆ.

ಹವಾಮಾನ ಇಲಾಖೆಯ ಮುನ್ಸುಚನೆ ಪ್ರಕಾರ ಜಿಲ್ಲೆಯಲ್ಲಿ ಇನ್ನು ಮೂರ್ನಾಲ್ಕು ದಿನ ಮಳೆಯಾಗಲಿದ್ದು ಅದು ಕಾರಂಜಾ ಜಲಾಶಯಕ್ಕೆ ವರದಾನವಾಗತ್ತೋ ಕಾದು ನೋಡಬೇಕಿದೆ.