ಜೀವ ಜಲ ಮಿತ ಬಳಕೆಗೆ ಸಲಹೆ

ವಿಜಯಪುರ,ಏ೧೧-ಮಾನವ ಹಾಗೂ ಎಲ್ಲಾ ಜೀವರಾಶಿಗೆ ಪ್ರಕೃತಿಯು ನೀಡುರುವ ಜೀವ ಜಲವನ್ನು ಮಿತವಾಗಿ ಬಳಸುವುದು, ನೀರಿನ ಮೂಲಗಳನ್ನು ಸಂರಕ್ಷಿಸುವುದು ಹಾಗೂ ಭೂಮಿಯ ಅಂರ್ತಜಲವನ್ನು ವೃದ್ದಿಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಗೊಡ್ಲುಮುದ್ದೇನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಆನಂದಮ್ಮ ಮಂಜುನಾಥ್ ತಿಳಿಸಿದರು.
ಅವರು ಇಲ್ಲಿಗೆ ಸಮೀಪದ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಪಂಚಾಯಿತಿವತಿಯಿಂದ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಶಕ್ತಿ ಅಭಿಯಾನಯಡಿಯಲ್ಲಿ “ದುಡಿಯೋಣ ಬಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಜಾಗೃತಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀರಿನ ಮೂಲಗಳು ಇಲ್ಲದೆ ಬರದಿಂದ ಕಂಗೆಟ್ಟಿರುವ ಜಿಲ್ಲೆಯಲ್ಲಿ ನೀರಿನ ಮಿತ ಬಳಕೆಗೆ ಒತ್ತು ನೀಡುವ ಅಗತ್ಯವಿರುವುದರಿಂದ ಜಲಶಕ್ತಿ ಅಭಿಯಾನ ಮುಖ್ಯವಾಗಿದೆ. ಅಂತರ್ಜಲ ರಕ್ಷಣೆ, ನೀರಿನ ಮಿತ ಬಳಕೆ, ಚೆಕ್ ಡ್ಯಾಂ ನಿರ್ಮಾಣದಿಂದ ಆಗುವ ಪ್ರಯೋಜನ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಅರಿವು ನೀಡುವುದರಿಂದ ಅದು ಸಮುದಾಯಕ್ಕೂ ಸುಲಭವಾಗಿ ತಲುಪಲಿದೆ. ಮಕ್ಕಳು ಮನೆಗಳಲ್ಲೂ ತಮ್ಮ ಪೋಷಕರಿಗೆ ನೀರಿನ ಮಿತ ಬಳಕೆ ಬಗ್ಗೆ ತಿಳಿಸಿಕೊಡುತ್ತಾರೆ. ಮಳೆ ನೀರು ಕೊಯ್ಲು ಇಂದಿನ ಅಗತ್ಯವಾಗಿದೆ.ಈ ಕುರಿತು ಮಕ್ಕಳಿಗೆ ಮಾಹಿತಿ ನೀಡುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಕೈಗೊಂಡಿದ್ದು, ಹನಿ ನೀರಾವರಿ, ತುಂತುರು ನೀರಾವರಿ ಅರಿವು ಮೂಡಿಸಲಾಗುವುದು ಎಂದರು.
ಉಪಾಧ್ಯಕ್ಷ ಮುರುಳಿ ಮೋಹನ್ ಮಾತನಾಡಿ, ಅಂತರ್ಜಲ ಕುಸಿತದಿಂದ ತಾಲೂಕಿನಲ್ಲಿ ೧೦೦೦ ಅಡಿಯಷ್ಟು ಕೊಳವೆ ಬಾವಿ ಕೊರೆಸಿದರು ನೀರು ಸಿಗುತ್ತಿಲ್ಲ, ಇಂತಹ ಸ್ಥೀತಿಯಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಕರೆಗಳು, ಕುಂಟೆಗಳ ಸೇರಿದಂತೆ ನೀರಿನ ಸಂರಕ್ಷಣೆಯ ಬಗ್ಗೆ ತಿಳಿಸುವ ಕಾರ್ಯಕ್ರಮ ಆಗಬೇಕು, ಭವಿಷ್ಯದಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಎದುರಾಗುವ ಆತಂಕ ಇರುವುದರಿಂದ ಶಾಲಾ ಹಂತದಲ್ಲೇ ಮಕ್ಕಳಿಗೆ ಅರಿವು ಮೂಡಿಸಿ ನೀರಿನ ಮೂಲಗಳನ್ನು ಸಂರಕ್ಷಿಸುವ ಕೆಲಸ ಮಾಡಲಾಗುತ್ತದೆ ಎಂದು ಮಾಹಿತಿ ನೀಡಬೇಕು ಎಂದರು.
ಇಂಜೀನಿಯರ್ ಅವಿನಾಶ್ ಮಾತನಾಡಿ, ಜೀವ ಜಲವನ್ನು ಮುಂದಿನ ಪೀಳಿಗೆಗೆ ಉಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕೇವಲ ಒಂದು ದಿನಕ್ಕೆ ಈ ಕಾರ್ಯಕ್ರಮ ಮಾಡುವುದರಿಂದ ನೀರನ್ನು ಉಳಿಸಲು ಸಾಧ್ಯವಿಲ್ಲ, ನೀರಿನ ಸಂರಕ್ಷೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾದಾಗ ಮಾತ್ರ ಜಲಸಂಪನ್ಮೂಲ ಉಳಿಯುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀನಿವಾಸ್, ಪಿಡಿಓ. ಉಮಶಂಕರ್, ಪಂಚಾಯಿತಿ ಸದಸ್ಯರಾದ ರತ್ನಮ್ಮ, ಮುರುಳಿಧರ್, ಕೊಮಲಾ, ಮುನಿಆಂಜಿನಪ್ಪ, ಸುರೇಶ್, ಗೀತಾ, ಭಾಗ್ಯಲಕ್ಷ್ಮೀ, ರಾಜಣ್ಣ, ಜಯಮ್ಮ, ಕೃಷ್ಣಮೂರ್ತಿ, ಲಾವಣ್ಯ, ಮಂಜುಳಾ, ಮಹೇಂದ್ರಬಾಬು, ಪದ್ಮ, ಹರೀಶ್, ಮುನಿಯಪ್ಪ, ಲಕ್ಷಮ್ಮ, ಜಗದೀಶ್, ರಂಜಿತಾ ಇತರರು ಹಾಜರಿದ್ದರು.