ದಾವಣಗೆರೆ.ಮಾ.೨೪: ಸಿಹಿ ನೀರಿನ ಸಂಪನ್ಮೂಲಗಳನ್ನು ಸುಸ್ಥಿರವಾಗಿ ನಿರ್ವಹಿಸಲು ಮತ್ತು ನೀರಿನ ಮಾಲೀನ್ಯ, ಕೊರತೆ, ಅಸಮರ್ಪಕ ನೀರು ಮತ್ತು ನೈರ್ಮಲ್ಯದ ಕೊರತೆಯಂತಹ ಜಲ ಸಂಬAಧಿತ ಸಮಸ್ಯೆಗಳ ಬಗ್ಗೆ ಇನಷ್ಟು ತಿಳಿದುಕೊಳ್ಳಲು ಜನರನ್ನು ಜಾಗೃತಗೊಳಿಸುವುದು ಹಾಗೂ ಪ್ರೇರೇಪಿಸುವುದು ಜಲ ದಿನಾಚರಣೆಯ ಮುಖ್ಯ ಉದ್ಧೇಶ. ಜೀವ ಜಲದ ಸಂರಕ್ಷಣೆಯತ್ತ ಜನರ ಕಾಳಜಿ ಅಗತ್ಯ ಎಂದು ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‌ಕುಮಾರ್ ಹೇಳಿದರು.ನಗರದ ಹೊರವಲಯದಲ್ಲಿನ ಎಸ್‌ಪಿಎಸ್ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಸಮಿತಿ, ಆಕ್ಷನ್ ಇನ್ಸಿಯೇಟಿವ್ ಫಾರ್ ಡೆವಲಪ್‌ಮೆಂಟ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಜಲದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನೀರು ಮತ್ತು ನೈರ್ಮಲ್ಯದ ಬಿಕ್ಕಟ್ಟನ್ನು ಪರಿಹರಿಸಲು ಬದಲಾವಣೆಯನ್ನು ವೇಗಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ವಿಶ್ವ ಸಂಸ್ಥೆಯ ಧ್ಯೇಯವಾಕ್ಯವಾಗಿದೆ. ನೀರು ಜೀವನದ ಅಮೃತ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದ್ದರೂ ಒಂದು ಕಡೆ ಅನೇಕರು ನೀರಿನ ನಿರಂತರ ಸೌಲಭ್ಯ ಪಡೆದಿದ್ದಾರೆ. ಮತ್ತೊಂದೆಡೆ ಯಾವುದೆ ಪ್ರಮಾಣದ ನೀರು ಸಿಗದ ದೊಡ್ಡ ಜನಸಖ್ಯೆ ಇದೆ. ಇಂತಹ ಸಂದರ್ಭದಲ್ಲಿ ಪರಿಶುದ್ದ ಕುಡಿಯುವ ನೀರಿಲ್ಲದ ಕಾರಣ ವಾರ್ಷಿಕವಾಗಿ 1.4 ಮಿಲಿಯನ್ ಜನರು ಸಾಯುತ್ತಿದ್ದಾರೆ. 74 ಮಿಲಿಯನ್ ಜನರು ಕಳಪೆ ನೀರು, ನೈರ್ಮಲ್ಯದ ಕೊರತೆಗಳ ಕಾಯಿಲೆಗಳ ಕಾರಣ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ 2050ರ ವೇಳೆಗೆ ಜಾಗತಿಕ ನೀರಿನ ಬೇಡಿಕೆ ಶೇ.55ರಷ್ಟು ಹೆಚ್ಚಾಗುವುದು ಕಳವಳಕಾರಿ ವಿಷಯ ಎಂದು ಕಳವಳ ವ್ಯಕ್ತ ಪಡಿಸಿದರು.