`ಜೀವ ಕಾರುಣ್ಯದ ಮಹಾಕವಿ ವೇಮನ’

ಕಲಬುರಗಿ:ಜ.19: ಜಾತೀಯತೆ, ಅಂಧಶ್ರದ್ಧೆ ಮತ್ತು ಮೇಲು-ಕೀಳುಗಳನ್ನು ತಮ್ಮ ವಚನಗಳ ಮೂಲಕ ಧಿಕ್ಕರಿಸಿದ್ದ ಮಹಾಯೋಗಿ ವೇಮನ ಅವರು, ಜೀವಕಾರುಣ್ಯದ ಕವಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ಕಲಬುರಗಿ ಸಹಯೋಗದಲ್ಲಿ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ 612 ನೇ ಶ್ರೀ ಮಹಾಯೋಗಿ ವೇಮನ ಅವರ ಜಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಂತೆಯೊಳಗಿದ್ದುಕೊಂಡು ಮಹಾಸಂತನಾದ ವೇಮನ, ಆದರ್ಶ ಸಮಾಜಕ್ಕಾಗಿ, ಜೀವಪರತೆಗಾಗಿ ಶ್ರಮಿಸಿ, ವಚನಗಳ ಮೂಲಕ ಸಮಾಜವನ್ನು ತಿದ್ದುವ ಸಮಾಜ ಸುಧಾರಕರಾದರು. ಕನ್ನಡಲ್ಲಿ ಸರ್ವಜ್ಞ ಮತ್ತು ತಮಿಳಿನಲ್ಲಿ ತಿರುವಳ್ಳುವರ್ ಅವರಂತೆ ತೆಲುಗು ಭಾಷಾ ಸಾಹಿತ್ಯದಲ್ಲಿ ಶ್ರೇಷ್ಠ ವಚನಕಾರ ವೇಮನ ಎಂದು ಹೇಳಿದರು.
ವೇಮನರ ಪದ್ಯಗಳ ಕುರಿತು ಮೊಟ್ಟ ಮೊದಲ ಬಾರಿಗೆ ಬೆಳಕು ಚೆಲ್ಲಿದ್ದು ಬ್ರಿಟಿಷ್ ಅಧಿಕಾರಿ ಸಿ.ಪಿ.ಬ್ರೌನ್. ವೇಮನ ಪದ್ಯಗಳನ್ನು ಇಂಗ್ಲೀಷನಿಂದ, ತೆಲುಗುವಿನಿಂದ ಕನ್ನಡಕ್ಕೆ ತರ್ಜುಮೆ ಮಾಡಿ, ದಾಖಲೆಗೊಳಿಸಿದ್ದು ಸಚಿವರಾದ ಶ್ರೀ ಎಚ್.ಕೆ.ಪಾಟೀಲ ಅವರ ಚಿಕ್ಕಪ್ಪನವರಾದ ಶ್ರೀ ಎಸ್.ಆರ್.ಪಾಟೀಲರವರು. ಅವರಿಂದಾಗಿ ಎರಡು ಸಾವಿರಕ್ಕೂ ಹೆಚ್ಚು ವಚನಗಳನ್ನು ಕನ್ನಡದಲ್ಲಿ ಓದುವ ಲಭ್ಯತೆಯಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷರು ಮತ್ತು ಸರ್ವಜ್ಞ ಕಾಲೇಜಿನ ಸಂಸ್ಥಾಪಕರಾದ ಪ್ರೊ.ಚೆನ್ನಾರೆಡ್ಡಿ ಪಾಟೀಲ ಅವರು ಮಾತನಾಡಿ, ಕಾಯಕ ಮತ್ತು ಸಾಧ್ವಿತನಕ್ಕೆ ಪ್ರಖ್ಯಾತರಾಗಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಮೈದುನನಾದ ವೇಮನರು, ಅತ್ತಿಗೆಯ ಮಾತಿನಂತೆ ದುಶ್ಚಟಗಳಿಂದ ದೂರವಿದ್ದು, ಸತತ ಅಧ್ಯಯನ ಮತ್ತು ಸಾಮಾಜಿಕ ಅನುಭವಗಳಿಂದ ಮಹಾಯೋಗಿ ವೇಮನ ಆದರು ಎಂದು ಹೇಳಿದರು.
ನಾವು ಕೂಡ ಸಮಾಜದ ಗುರು ಹಿರಿಯರಿಗೆ ವಿಧೇಯರಾಗಿ ಹಾಗೂ ಸಮಾಜದ ಬಡವರಿಗೆ ಸ್ಪಂದಿಸಿ, ಅವರ ಜೀವನದ ಗುಣಮಟ್ಟ ಸುಧಾರಿಸುವ ಹಾಗೆ ನಡೆದುಕೊಂಡಾಗ ಇಂತಹ ಜಯಂತಿಗಳು ಸಾರ್ಥಕವಾಗುತ್ತವೆ ಎಂದು ಅವರು ನುಡಿದರು.
ಶಿಷ್ಟಾಚಾರ ತಹಸೀಲ್ದಾರ ನಿಸಾರ್ ಅಹ್ಮದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೆಡ್ಡಿ ಸಮಾಜದ ಹಿರಿಯ ಉಪಾಧ್ಯಕ್ಷರಾದ ವಿ.ಶಾಂತರೆಡ್ಡಿ, ನೇತ್ರ ತಜ್ಞ ಡಾ.ವಿಶ್ವನಾಥರೆಡ್ಡಿ, ಪ್ರೊ.ಎಸ್.ಎಲ್.ಪಾಟೀಲ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.
ರಾಜ್ಯ ಸರಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಸಾವಯವ ಕೃಷಿ ತಜ್ಞ ಸೋಮನಾಥರೆಡ್ಡಿ ಪುರ್ಮಾ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಡಾ. ಕುಮಾರ ಕಣವಿ ಅವರಿಂದ ವೇಮನ ವಚನಗಳ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದ ಹಿರಿಯರಾದ ಡಾ.ವೀರಭದ್ರಪ್ಪ ಎಚ್., ನಂದೀಶರೆಡ್ಡಿ, ರಮೇಶ ಪಾಟೀಲ, ಚಂದ್ರಶೇಖರರೆಡ್ಡಿ ಮಲ್ಲಾಬಾದ್, ಶಂಕರಗೌಡ, ಮಲ್ಲಾರೆಡ್ಡಿ, ಡಾ.ಸುಮಂಗಲಾರೆಡ್ಡಿ ಇತರರು ಇದ್ದರು. ಪಂಚಾಕ್ಷರಿ ಕಣವಿ ನಿರ್ದೇಶನದಲ್ಲಿ ಸರ್ವಜ್ಞ ಚಿಣ್ಣರ ಲೋಕದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ವಿಶ್ವ ಕಾಮರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರರೆಡ್ಡಿ ವಂದಿಸಿದರು.