ಜೀವ ಉಳಿಸುವ ಕಾರ್ಯವೇ ಎಲ್ಲಕ್ಕಿಂತ ಮುಖ್ಯ

ಧಾರವಾಡ, ಏ.20: ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್ ನಿಯಂತ್ರಣದ ಕರ್ತವ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ವೈದ್ಯಕೀಯ ಆಮ್ಲಜನಕ ಪೂರೈಕೆ ಸಂಸ್ಥೆಗಳು, ಆಸ್ಪತ್ರೆಗಳಿಗೆ ಪ್ರಾಶಸ್ತ್ಯದಡಿ ಆಮ್ಲಜನಕ ಒದಗಿಸಬೇಕು. ಜೀವ ಉಳಿಸುವ ಕಾರ್ಯವೇ ಎಲ್ಲಕ್ಕಿಂತ ಮುಖ್ಯವಾದುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ಜಿಲ್ಲಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿಯಂತ್ರಣಕ್ಕೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕೋವಿಡ್ ನಿಯಂತ್ರಣದಲ್ಲಿ ತಮಗೆ ವಹಿಸುವ ಕರ್ತವ್ಯ, ಜವಾಬ್ದಾರಿಗಳನ್ನು ಪ್ರಥಮ ಆದ್ಯತೆಯಡಿ ನಿರ್ವಹಿಸಬೇಕು. ಜಿಲ್ಲೆಯ ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕ ಸರಬರಾಜು ಮಾಡುತ್ತಿರುವ ಸದರ್ನ್ ಗ್ಯಾಸ್ ಲಿಮಿಟೆಡ್, ಕರ್ನಾಟಕ ಇಂಡಸ್ಟ್ರೀಸ್ ಗ್ಯಾಸ್ ಲಿಮಿಟೆಡ್, ಪ್ರಾಕ್ಸ್ ಏರ್ ಹಾಗೂ ಐನಾಕ್ಸ್ ಸಂಸ್ಥೆಗಳು ವೈದ್ಯಕೀಯ ಚಿಕಿತ್ಸೆಗೆ ಪ್ರಥಮ ಪ್ರಾಶಸ್ತ್ಯದಡಿ ಆಮ್ಲಜನಕ ಒದಗಿಸಬೇಕು. ಕೇಂದ್ರ ಸರ್ಕಾರ ಸೂಚಿಸಿರುವ 9 ಅಗತ್ಯ ಕೈಗಾರಿಕೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕೈಗಾರಿಕೆಗಳಿಗೂ ಎಪ್ರಿಲ್ 22 ರ ನಂತರ ಆಕ್ಸಿಜನ್ ಪೂರೈಸಬಾರದು. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಇದುವರೆಗೆ ಆಕ್ಸಿಜನ್ ಕೊರತೆಯಾಗಿಲ್ಲ. ಇನ್ನು ಮುಂದೆಯೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ರೋಗಿಗಳ ಪ್ರಾಣ ಉಳಿಸುವುದೇ ಎಲ್ಲಕ್ಕಿಂತ ಮುಖ್ಯವಾದ ಜವಾಬ್ದಾರಿಯಾಗಿದೆ. ಅಕ್ಸಿಜನ್ ಪೂರೈಕೆ ಕುರಿತು ಯಾವುದೇ ದೂರುಗಳು ಬಂದರೆ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಗ್ಯಾಸ್ ಪೂರೈಕೆದಾರ ಸಂಸ್ಥೆಗಳು ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೆ ಸ್ಪಂದಿಸಲಾಗುವುದು. ಆಕ್ಸಿಜನ್ ಸರಬರಾಜಿಗೆ ಈಗ ಬಹುತೇಕವಾಗಿ ಬಳ್ಳಾರಿಯ ತೋರಣಗಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯ ಮೇಲೆ ಅವಲಂಬನೆಯಾಗಿದ್ದೇವೆ. ಬೇರೆ ರಾಜ್ಯಗಳಿಂದ ಯಾರಾದರೂ ಆಕ್ಸಿಜನ್ ತರಿಸಿಕೊಳ್ಳುತ್ತಿದ್ದರೆ ಅಂತಹ ಅವಲಂಬನೆ ಕೈಬಿಟ್ಟು, ರಾಜ್ಯದೊಳಗಿನ ಕೈಗಾರಿಕೆಗಳ ಮೂಲದಿಂದಲೇ ಪಡೆಯಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಸೋಂಕಿತರ ಸ್ಥಳಾಂತರಕ್ಕೆ ತಂಡ: ಕೋವಿಡ್ ಸೋಂಕಿತರನ್ನು ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರುಗಳಿಗೆ ಸ್ಥಳಾಂತರಿಸಲು ಕಳೆದ ಬಾರಿಯಂತೆ ಈ ಬಾರಿಯೂ ಭೂ ದಾಖಲೆಗಳ ಉಪನಿರ್ದೇಶಕರು, ಕಂದಾಯ, ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿದೆ. ಸೋಂಕಿತರನ್ನು ಸಂಪರ್ಕಿಸಿ ತುರ್ತು ಚಿಕಿತ್ಸಾ ವಾಹನದ ಮೂಲಕ ಆಸ್ಪತ್ರೆಗಳಿಗೆ ಕರೆತರಲು ವ್ಯವಸ್ಥೆ ಮಾಡಬೇಕು. ಹುಬ್ಬಳ್ಳಿ ನಗರದಲ್ಲಿ 7, ಧಾರವಾಡದಲ್ಲಿ 3 ಆ್ಯಂಬುಲೆನ್ಸ್‍ಗಳ ಸೇವೆ ನಿರಂತರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಒದಗಿಸುವುದು ಕಡ್ಡಾಯ: ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗಿರುವ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಆಸ್ಪತ್ರೆಯ ಒಟ್ಟು ಸಾಮಥ್ರ್ಯದ ಶೇ.50 ಹಾಸಿಗೆಗಳನ್ನು ಕಡ್ಡಾಯವಾಗಿ ಕೋವಿಡ್ ಚಿಕಿತ್ಸೆಗೆ ಮೀಸಲಿಡಬೇಕು. ಶೇ.50 ರ ಸರ್ಕಾರಿ ಕೋಟಾದ ಹಾಸಿಗೆಗಳಿಗೆ ಲೇಬಲ್ ಹಾಕಿರಬೇಕು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಈ ಆಸ್ಪತ್ರೆಗಳಿಗೆ ಶುಲ್ಕ ಪಾವತಿಸಲಾಗುವುದು. ಎಬಿಎಆರ್‍ಕೆ ಯೋಜನೆಗೆ ಸೇರದ ಆಸ್ಪತ್ರೆಗಳು ಕೂಡಲೇ ನೋಂದಾಯಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳ ಮೇಲ್ವಿಚಾರಣೆಗೆ ನೇಮಿಸಿರುವ ನೋಡಲ್ ಅಧಿಕಾರಿಗಳು ಪ್ರತಿನಿತ್ಯ ಪರಿಶೀಲನೆ ಮಾಡಿ ವರದಿ ನೀಡಬೇಕು ಎಂದರು.

ಹಾಸ್ಟೆಲ್ ವಿದ್ಯಾರ್ಥಿಗಳ ತಪಾಸಣೆ ಕಡ್ಡಾಯ: ಜಿಲ್ಲೆಯ ಯಾವುದೇ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸುವ ಮುನ್ನ ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಪಡಿಸಬೇಕು. ನೆಗೆಟಿವ್ ವರದಿ ಬಂದ ನಂತರವೇ ಅವರನ್ನು ಮನೆಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಲಾಬೂರಾಮ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ. ಸುಶೀಲಾ, ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.