ಜೀವಸಂಕುಲ ಉಳಿಯಲು ಜಲ ಸಂವರ್ಧನೆ ಅಗತ್ಯ

ಬೀದರ:ಜ.3: ಭೂಮಿ ಮೇಲೆ ಜೀವಸಂಕುಲ ಉಳಿಯಬೇಕಾದರೆ ಜಲ ಸಂವರ್ಧನೆ ಹಾಗೂ ಸಂರಕ್ಷಣೆ ಅಗತ್ಯವಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರ ಗೋರ್ಮೆ ತಿಳಿಸಿದರು.

ಶುಕ್ರವಾರ ನಗರದ ಶರಣನಗರದಲ್ಲಿನ ಸಪ್ತಗಿರಿ ಐ.ಟಿ.ಐ ಕಾಲೇಜು ಅವರಣದಲ್ಲಿ ನೆಹರು ಯುವ ಕೇಂದ್ರ ಹಾಗೂ ವೀರಭದ್ರೇಶ್ವರ ಏಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್‍ಗಳ ಸಹಯೋಗದಲ್ಲಿ ಹಮ್ಮಿಕೊಂಡ ‘ಜಲ ಸಂವರ್ಧನೆ ಹಾಗೂ ಸಂರಕ್ಷಣೆ’ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಂದು ಅನೇಕ ರೀತಿಯಲ್ಲಿ ನೀರು ಪೋಲು ಮಾಡುತ್ತಿರುವನು. ಇದರಿಂದ ಜಲಕ್ಷಾಮ ಉಂಟಾಗಿ ಭೀಕರ ಬರಗಾಲ ಅವರಿಸುತ್ತಿದೆ. ಆಳಕ್ಕೆ ಬೋರವೇಲ್‍ಗಳು ಕೊರೆಯುತ್ತಿರುವ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದು ಹೀಗೆ ಮುಂದುವರೆದರೆ ನೀರಿಲ್ಲದೇ ಅದೆಷ್ಟೋ ಪ್ರಾಣಿ, ಪಕ್ಷಿಗಳು ಸತ್ತು ಹೋಗುತ್ತವೆ. ಪ್ರಕೃತಿ ವಿನಾಶದತ್ತ ಸಾಗುತ್ತದೆ ಎಚ್ರವ ವಹಿಸಿ, ನೀರು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗುವಂತೆ ಗೋರ್ಮೆ ಕರೆ ಕೊಟ್ಟರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಉಪನ್ಯಾಸಕ ಅನಿಲ ಜಾಧವ ಮಾತನಾಡಿ, ದೈನಂದಿನ ಬದುಕಿಗೆ ಗಾಳಿಯ ತರುವಾಯ ನೀರೇ ನಮಗೆ ಉಸಿರು. ನೀರು ಕುಡಿದು 21 ದಿನ ಬದುಕುವ ಶಕ್ತಿ ಮನುಷ್ಯನಿಗಿದ್ದು, ಶುದ್ದ ಹಾಗೂ ಆರೋಗ್ಯಕರ ಜಲ ಸೇವನೆ ನಮ್ಮ ರೂಢಿಯಾಗಬೇಕು. ಹೆಚ್ಚೆಚ್ಚು ಸಸಿಗಳು ಬೆಳೆಸಿದರೆ ಮಳೆಯಾಗಿ ಭೂಮಿಯಲ್ಲಿ ನೀರು ಇಂಗುತ್ತದೆ. ಅದರಿಂದ ಬಾವಿಗಳು ಹಾಗೂ ಬೋರ್ವೆಲ್‍ಗಳಲ್ಲಿ ನೀರು ಚಿಮ್ಮಲು ಸಾಧ್ಯವಿದೆ ಎಂದರು.

ವೀರಭದ್ರೇಶ್ವರ ಏಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ ಬೆಳಕೋಟೆ ಪ್ರಾಸ್ತಾವಿಕ ಮಾತನಾಡಿ, ವರ್ಷ ಪೂರ್ತಿ ನೀರು ಸಂಗ್ರಹವಾಗಿಸಲು ಪ್ರತಿ ಮನೆಯಲ್ಲಿ ಆಳವಾದ ಟ್ಯಾಂಕ್‍ಗಳು ನಿರ್ಮಿಸಬೇಕು, ಹೊಲ ಗದ್ದೆಗಳಲ್ಲಿ ಸಣ್ಣ ಸಣ್ಣ ಕರೆ ಕಟ್ಟೆಗಳು ನಿರ್ಮಿಸಿ, ಚೆಕ್ ಡ್ಯಾಮ್ ಸ್ಥಾಪಿಸಿ ನೀರು ನಿಲ್ಲಿಸುವ ಮೂಲಕ ಜಲ ಸಂರಕ್ಷಣೆ ನಮ್ಮ ಗುರಿಯಾಗಬೇಕಿದೆ ಎಂದರು.

ಕಾಲೇಜಿನ ಸಿಬ್ಬಂದಿ, ಅನೇಕ ಯುವ ಸಂಘ, ಸಂಸ್ಥೆಗಳ ಪ್ರತಿತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.