ಜೀವಸಂಕುಲದ ಉಳಿವಿಗೆ ಸಸಿ ನೆಡಿ: ಪಿಎಸ್‍ಐ ಹನುಮಂತಪ್ಪ ತಳವಾರ್

ಮರಿಯಮ್ಮನಹಳ್ಳಿ, ಜೂ.06: ಜೀವ ಸಂಕುಲದ ಉಳಿವಿಗೆ ಗಿಡಮರಗಳನ್ನು ಬೆಳಸಬೇಕಾಗಿದೆ ಎಂದು ಪಟ್ಟಣ ಪೊಲೀಸ್ ಠಾಣೆಯ ಪಿಎಸ್‍ಐ ಹನುಮಂತಪ್ಪ ತಳವಾರ್ ಅಭಿಪ್ರಾಯ ಪಟ್ಟರು.
ಅವರು ಶನಿವಾರ ವಿಶ್ವ ಪರಿಸರ ದಿನಾಚರಣೆಯನ್ನು ಠಾಣೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಿ ಮಾತನಾಡಿದರು.
ಇಂದು ಕೊರೋನಾ ಸೋಂಕಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಆಕ್ಸಿಜನ್‍ಗಾಗಿ ಪರಿತಪಿಸುವಂತಾಗಿದೆ. ಅದಕ್ಕಾಗಿ ಸಾವಿರಾರು ಕೋಟಿ ರೂಪಾಯಿ ಹಣ ವ್ಯಯಮಾಡಲಾಗುತ್ತಿದೆ. ಪರಿಸರ ಸರ್ವಜೀವಸಂಕುಲಗಳ ತಾಯಿ ಎಲ್ಲರನ್ನು ಪೋಷಿಸುವ ಸಾಮಥ್ರ್ಯ ಪರಿಸರಕ್ಕೆ ಇದೆ. ಪರಿಸರದಲ್ಲಿನ ಗಿಡಮರಗಳು ಉಚಿತವಾಗಿ ಆಕ್ಸಿಜನ್ ಕೊಡುತ್ತಾ ಬಂದಿದ್ದು, ಪ್ರತಿಯೊಬ್ಬರಿಗೂ ಪರಿಸರ ಶಿಕ್ಷಣ ಪಡೆದು ಗಿಡಮರಗಳನ್ನು ಬೆಳೆಸಿ ರೋಗಗಳಿಂದ ಮುಕ್ತರಾಗಿ ಆರೋಗ್ಯವಾಗಿ ಬಾಳಿ ಎಂದರು.
ಅವರು ಮಾತನಾಡಿ ಇದನ್ನು ಅರ್ಥಮಾಡಿಕೊಳ್ಳದ ಮಾನವ ನಾಗರೀಕತೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಳುಮಾಡುತ್ತಾ ಜೀವ ಸಂಕುಲಗಳ ವಿನಾಶಕ್ಕೆ ಕಾರಣನಾಗುತ್ತಿದ್ದಾನೆ. ನಾವು ಹಾಳುಮಾಡಿರುವ ಪರಿಸರವನ್ನು ಇನ್ನು ಮುಂದೆ ಗಿಡಮರಗಳನ್ನು ಬೆಳೆಸುವ ಮೂಲಕ ಸಮತೋಲನ ಸ್ಥಿತಿಗೆ ತರಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿ.ಎಸ್.ಐ. ಬಿ.ಮೀನಾಕ್ಷಿ, ಪ್ರೊಭೇಷನರಿ ಪಿ.ಎಸ್.ಐ. ನಾರಾಯಣ, ಎ.ಎಸ್.ಐ.ನಿರಂಜನಗೌಡ, ಸಿಬ್ಬಂದಿಗಳಾದ ಸಿದ್ದೇಶ್, ಸಂಜೀವ್, ಪ್ರವೀಣ್, ತಿಪ್ಪೆಸ್ವಾಮಿ, ಲಕ್ಷ್ಮಿ, ಅರಣ್ಯ ಇಲಾಖೆಯ ಸಿಬ್ಬಂದಿ ಬಸವರಾಜ ಮತ್ತಿತರರು ಇದ್ದರು.