ಜೀವಸಂಕುಲಗಳ ಉಳಿವಿಗೆ ಪ್ರಕೃತಿ ದೊಡ್ಡ ಶಕ್ತಿ

ಚಿತ್ರದುರ್ಗ.ಜೂ.೬: ಸಕಲ ಜೀವರಾಶಿಗಳ ಉಳಿವಿಗೆ ಪ್ರಕೃತಿ ದೊಡ್ಡ ಶಕ್ತಿಯಾಗಿದೆ ಎಂದು ಡಯಟ್ ಉಪ ಪ್ರಾಚಾರ್ಯ ಡಿ.ಆರ್.ಕೃಷ್ಣಮೂರ್ತಿ ಹೇಳಿದರು. ನಗರದ ಡಯಟ್‌ನಲ್ಲಿ  ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ನಮ್ಮ ಬದುಕಿನಲ್ಲಿ ಪ್ರಕೃತಿಯೇ ದೇವರಾಗಿದ್ದು ನಮಗೆ ಅಗತ್ಯವಿರುವ ಮೂಲಭೂತ ಅವಶ್ಯಕತೆಗಳನ್ನು ನೀಡಿದೆ. ನಮಗೆ ಉತ್ತಮ ಆರೋಗ್ಯ ದೊರೆಯಬೇಕಾದರೆ ಪರಿಸರ ಮಾಲಿನ್ಯ ಮುಕ್ತವಾಗಿರಬೇಕು. ನಾವು ಪರಿಸರವನ್ನು ಪೋಷಿಸಿದರೆ ಅದು ನಮ್ಮನ್ನು ಪೋಷಿಸುತ್ತದೆ. ನಗುವ ಕಾನನ ಭುವಿಗೆ ಚೇತನವಾಗಿದ್ದು ಶಿಕ್ಷಕರು ಶಾಲೆಗಳಲ್ಲಿ ಇಕೋ ಕ್ಲಬ್‌ಗಳು, ನಾಟಕ, ಪ್ರಹಸನದ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು ಎಂದರು. ಕ್ಷೇತ್ರ ಪ್ರವಾಸ, ಚರ್ಚೆ ಏರ್ಪಡಿಸಿ ಪರಿಸರ ಶಿಕ್ಷಣಕ್ಕೆ ಕಲಿಕಾ ವಾತಾವರಣ ನಿರ್ಮಿಸಿ ಸಂವೇದನಾಶೀಲ ಗುಣ ಬೆಳೆಸುವುದರ ಮೂಲಕ ಜಾಗೃತಿ ಮೂಡಿಸಬೇಕು ಎಂದರು.ಹಿರಿಯ ಉಪನ್ಯಾಸಕರಾದ ಈ.ಹಾಲಮೂರ್ತಿ, ಮಹಮದ್ ಅಯೂಬ್ ಸೊರಬ್, ಎಸ್.ಸಿ.ಪ್ರಸಾದ್ ಉಪನ್ಯಾಸಕರಾದ ಎಸ್.ಬಸವರಾಜು, ಎನ್.ರಾಘವೇಂದ್ರ, ಬಿ.ಎಸ್.ನಿತ್ಯಾನಂದ, ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್, ಆರ್.ಲಿಂಗರಾಜು , ಕಚೇರಿ ಅಧೀಕ್ಷಕರಾದ ಗೀತಾ, ಕವಿತಾ, ಪ್ರಥಮ ದರ್ಜೆ ಸಹಾಯಕ ಮಂಜುನಾಥ್, ಮಮತಾ ಮತ್ತಿತರರಿದ್ದರು.