ಜೀವವಿದ್ದರೆ ಜೀವನ, ಊರಿನತ್ತ ಹೊರಟ ಜನ

ಬೆಂಗಳೂರು, ಏ.೨೭- ಮಹಾನಗರಿಯಲ್ಲಿ ಬದುಕುಕಟ್ಟಿಕೊಂಡಿದ್ದ ಕಾರ್ಮಿಕರು, ದಿನಗೂಲಿ ನೌಕರರು, ಸಣ್ಣಪುಟ್ಟ ಕೆಲಸಗಳಲ್ಲಿ ನಿರತರಾಗಿದ್ದ ಮಂದಿ ಕೊರೊನಾ ಮಹಾಸ್ಫೋಟ ನಿಯಂತ್ರಣಕ್ಕೆ ೧೪ ದಿನಗಳ ಕಾಲ ಲಾಕ್ ಡೌನ್ ಮಾದರಿಯಲ್ಲಿ ಕಠಿಣ ಕರ್ಫ್ಯೂ ಜಾರಿಗೊಳಿಸುತ್ತಿದ್ದಂತೆ, ಗಂಟುಮೂಟೆ ಕಟ್ಟಿಕೊಂಡು ಗುಳೆ ಹೊರಟಿದ್ದಾರೆ.

ಜೀವವಿದ್ದರೆ ಜೀವನ, ಮೊದಲು ತಮ್ಮ ಪ್ರಾಣ ಉಳಿಸಿಕೊಳ್ಳೋಣ, ಆಮೇಲೆ ಬದುಕಿನ ಬಗ್ಗೆ ಯೋಚಿಸೋಣ, ಎನ್ನುವ ನಿರ್ಧಾರಕ್ಕೆ ಬಂದಿರುವ ಸಹಸ್ರಾರು ಕಾರ್ಮಿಕರು ಸೇರಿದಂತೆ, ಜನರು ಕೈಯಲ್ಲಿ ಬ್ಯಾಗ್ ಹಿಡಿದು ಬೆಂಗಳೂರು ನಗರ ಖಾಲಿ ಮಾಡಿ ತಮ್ಮ ತಮ್ಮ ಊರುಗಳತ್ತ ಮುಖಮಾಡಿದ್ದಾರೆ.

ಸೋಂಕು ತಡೆಗಟ್ಟಲು ಸರಕಾರ ಇಂದು ರಾತ್ರಿಯಿಂದ ಮುಂದಿನ ೧೪ ದಿನಗಳ ಕಾಲ ಕಠಿಣ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಕೆಲಸ ಸಿಗದೆಂಬ ಭೀತಿಯಿಂದ ಅನಿವಾರ್ಯವಾಗಿ ಜನರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ.

ಬೆಳಿಗ್ಗೆಯಿಂದಲೇ ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಸಿಟಿ ರೈಲು ನಿಲ್ದಾಣ ಸೇರಿದಂತೆ, ನಗರದ ವಿವಿಧ ಭಾಗಗಳಿಂದ ಜನರು ತಮ್ಮ ತಮ್ಮ ಊರುಗಳಿಗೆ ತೆರಳಲು ಆಗಮಿಸಿದ ಹಿನ್ನೆಲೆಯಲ್ಲಿ ಜನರು ಗಿಜಿಗುಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳು ಪ್ರಯಾಣಿಕರಿಂದ ತುಂಬಿ ತುಳುಕಾಡುತ್ತಿದ್ದ ಹಿನ್ನೆಲೆಯಲ್ಲಿ ಇದನ್ನು ದುರುಪಯೋಗ ಪಡಿಸಿಕೊಂಡ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣಗಳು ಅಲ್ಲಲ್ಲಿ ಕಂಡುಬಂದವ.

ನಗರದಲ್ಲಿ ಕೊರೊನಾ ಸೋಂಕು ಪ್ರಕರಣ ಹಾಗೂ ಸಾವಿನ ಪ್ರಕರಣ ಹೆಚ್ಚಾಗುತ್ತಿರುವುದರಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ಕಾರ್ಮಿಕ ವರ್ಗ, ನಗರ ತೊರೆದಿದ್ದಾರೆ.

ಲಕ್ಷಾಂತರ ಮಂದಿ ಗುಳೆ:

ಅದರಲ್ಲೂ ೧೪ ದಿನ ಸರಕಾರ ಕರ್ಫ್ಯೂ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯದ ಹಿನ್ನೆಲೆಯಲ್ಲಿ ಹೊಟೇಲ್, ರೆಸ್ಟೋರೆಂಟ್, ಬೇಕರಿ, ಕಟ್ಟಡ ಕಾರ್ಮಿಕರು, ರಸ್ತೆ ಬದಿಯ ವ್ಯಾಪಾರಿಗಳು, ದಿನಗೂಲಿ ನೌಕರರು ಸೇರಿದಂತೆ, ಒಂದು ಲಕ್ಷಕ್ಕೂ ಅಧಿಕ ಮಂದಿ ಜನರು ಬೆಂಗಳೂರು ತೊರೆದಿದ್ದಾರೆ.

ಮೆಜೆಸ್ಟಿಕ್, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, ೮ ನೇ ಮೈಲಿ ಬಳಿ ಗಂಟುಮೂಟೆ ಕಟ್ಟಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ಬಸ್‌ಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು.

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಸಾವಿರಾರು ಜನ ಗಂಟುಮೂಟೆ ಕಟ್ಟಿಕೊಂಡು ತಮ್ಮೂರುಗಳ ಪಯಣ ಬೆಳೆಸಿದರು. ಆರಂಭದಲ್ಲಿ ಬಸ್ ಕೊರತೆ ಎದುರಾಗಿತ್ತು, ಆದರೆ ಪರಿಸ್ಥಿತಿ ಅವಲೋಕಿಸಿ ಸಾರಿಗೆ ಇಲಾಖೆ ಅಧಿಕಾರಿಗಳು ಅಗತ್ಯತೆಗೆ ತಕ್ಕಂತೆ ರಾಜ್ಯದ ಮೂಲೆಮೂಲೆಗಳಿಗೆ ಬಸ್ ಸೌಲಭ್ಯ ಕಲ್ಪಿಸಿದ್ದರಿಂದ ಸಿಕ್ಕಿದ ಬಸ್‌ಗಳನ್ನು ಹತ್ತಿ ಊರುಗಳತ್ತ ಹೊರಟರು.

ನಿಯಮ ಗಾಳಿಗೆ ತೂರಿದ ಮಂದಿ

ಕೊರೊನಾ ಸೋಂಕು ಹೆಚ್ಚಳದಿಂದ ತಮ್ಮ ತಮ್ಮ ಊರಿಗೆ ತೆರಳಲು ಮುಂದಾದ ಕಾರ್ಮಿಕರು ಬಸ್ಸು ಎಲ್ಲಿ ಮಿಸ್ ಆಗುತ್ತದೋ ಎನ್ನುವ ಆತಂಕದಿಂದ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಬಸ್ ಹತ್ತಲು ಹರಸಾಹಸ ನಡೆಸುತ್ತಿದ್ದ ಸನ್ನಿವೇಶ ಎದುರಾಗಿತ್ತು.

ಪ್ರಯಾಣಿಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಹಿನ್ನೆಲೆಯಲ್ಲಿ ಬಸ್ಸುಗಳಲ್ಲೂ ಕೂಡ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಳ್ಳುತ್ತಿದ್ದು, ಫ್ಲಾಟ್‌ಫಾರಂಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ತಮ್ಮ ಊರುಗಳಿಗೆ ತೆರಳುವ ಸನ್ನಿವೇಶ ಕಂಡುಬಂತು

ಊರುಗಳಿಗೆ ಪ್ರಯಾಣ

ಬೆಂಗಳೂರಿನಿಂದ ಬೆಳಗಾವಿ, ಬೀದರ್, ವಿಜಯಪುರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನರು ತೆರಳಿದರು.

ಮೈಸೂರು, ಶಿವಮೊಗ್ಗ, ಮಂಡ್ಯ, ಚಾಮರಾಜನಗರ ಸೇರಿದಂತೆ, ರಾಜ್ಯದ ಮೂಲೆಮೂಲೆಗೆ ಜನರು ಗಂಟುಮೂಟೆ ಕಟ್ಟಿಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದ ದೃಶ್ಯ ನಗರದ ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲಿ ಸರ್ವೆಸಾಮಾನ್ಯವಾಗಿತ್ತು.