ಜೀವಮಾನ ಸಾಧನೆ ವೆಂಕಟಸಿಂಗ್ ಸೇರಿದಂತೆ ೧೬ ಪತ್ರಕರ್ತರಿಗೆ ಪ್ರಶಸ್ತಿ

ಜು.೨೯ ಮಸ್ಕಿಯಲ್ಲಿ ಪತ್ರಿಕಾ ದಿನಾಚರಣೆ : ವಾರ್ಷಿಕ ಪ್ರಶಸ್ತಿ ಪ್ರದಾನ
ರಾಯಚೂರು.ಜು.೨೭- ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಮಸ್ಕಿ ನೂತನ ಪತ್ರಿಕಾ ಭವನ ಉದ್ಘಾಟನಾ ಸಮಾರಂಭವೂ ಜು.೨೯ ರಂದು ಮಸ್ಕಿ ಪಟ್ಟಣದ ಬ್ರಮಾರಂಭ ದೇವಸ್ಥಾನದಲ್ಲಿ ನಡೆಯಲಿದೆಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮತ್ತು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷರಾದ ಚನ್ನಬಸವಣ್ಣ ಅವರು ಹೇಳಿದರು.
ಅವರಿಂದು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ, ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಸ್ಕಿ ತಾಲೂಕು ಘಟಕ ಈ ಕಾರ್ಯಕ್ರಮದ ಆತಿಥ್ಯ ವಹಿಸಲಿದೆ. ಡಿವಿಜಿ ಗುಂಡಂಪ್ಪ ಅವರ ಮಂಟಪ ಹಾಗೂ ಪಂ. ಬಸವಪ್ಪ ಶಾಸ್ತ್ರಿ ಇವರ ವೇದಿಕೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಗಚ್ಚಿನಮಠ ಮಸ್ಕಿ ಇವರು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಶಯ ನುಡಿಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮಾಡಲಿದ್ದಾರೆ. ಅತಿಥಿ ಉಪನ್ಯಾಸಕರಾಗಿ ವಿಜಯವಾಣಿ ಸಂಪಾದಕರಾದ ಕೆ.ಎಂ.ಚನ್ನೇಗೌಡ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೊಪ್ಪಳ ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ, ರಾಯಚೂರು ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ, ದೇವದುರ್ಗ ಶಾಸಕರಾದ ಕೆ.ಶಿವನಗೌಡ ನಾಯಕ, ಮಸ್ಕಿ ಶಾಸಕರಾದ ಆರ್.ಬಸವನಗೌಡ ತುರ್ವಿಹಾಳ, ರಾಯಚೂರು ಶಾಸಕರಾದ ಡಾ.ಶಿವರಾಜ ಪಾಟೀಲ್, ಸಿಂಧನೂರು ಶಾಸಕರಾದ ವೆಂಟಕರಾವ್ ನಾಡಗೌಡ, ಗ್ರಾಮೀಣ ಶಾಸಕರಾದ ಬಸವನಗೌಡ ದದ್ದಲ್, ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಲಿಂಗಸೂಗೂರು ಶಾಸಕರಾದ ಡಿ.ಎಸ್.ಹೂಲಗೇರಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಮಾನಪ್ಪ ವಜ್ಜಲ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಶರಣೇಗೌಡ ಪಾಟೀಲ್ ಬಯ್ಯಾಪೂರು, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜು, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ನಿಖಿಲ್ ಬಿ., ಸಿಇಓ ನೂರ್ ಜಹಾರ್ ಖಾನೂಮ್, ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಸಂಘದ ಉಪಾಧ್ಯಕ್ಷರಾದ ಭವಾನಿ ಸಿಂಗ್ ಠಾಕೂರ್, ರಾಜ್ಯ ಸಮಿತಿ ಸದಸ್ಯರಾದ ಶಿವಮೂರ್ತಿ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಹಜೀಜ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವೂ ಕಾರ್ಯಕ್ರಮದಲ್ಲಿ ನಡೆಯಲಿದೆ. ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳನ್ನು ಜಿಲ್ಲಾಧ್ಯಕ್ಷರಾದ ಆರ್.ಗುರುನಾಥ ಅವರು ಪ್ರಕಟಿಸಿದರು. ಜೀವಮಾನ ಸಾಧನೆ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ. ದಿ.ಎಂ.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರು ವಾಣಿ ಪ್ರಾಯೋಜಿತ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ಸುದ್ದಿಮೂಲ ವರದಿಗಾರರಾದ ಬಿ.ವೆಂಕಟಸಿಂಗ್ ಅವರಿಗೆ ನೀಡಲಾಗಿದೆ. ಸುದ್ದಿಮೂಲ ಪ್ರಾಯೋಜಿತ ದಿ.ಪ್ರಕಾಶದಿನ್ನಿ ಸ್ಮಾರಕ ಪ್ರಶಸ್ತಿ ಸಿಂಧನೂರು ಈನಾಡು ಪತ್ರಿಕೆಯ ವರದಿಗಾರರಾದ ಶ್ಯಾಮಕುಮಾರ, ಸುದ್ದಿಮೂಲ ಪ್ರಾಯೋಜಿತ ಗ್ರಾಮೀಣ ವರದಿಗಾರಿಕೆಗೆ ನೀಡುವ ಪ್ರಶಸ್ತಿ ಮಸ್ಕಿ ವಿಜಯವಾಣಿ ವರದಿಗಾರ ವೀರೇಶ ಸೌದ್ರಿ, ನರಸಿಂಹಾಚಾರ್ಯ ಗುಡಿ ಸ್ಮರಣಾರ್ಥ ಪ್ರಶಸ್ತಿಯನ್ನು ಸಿರವಾರದ ಪ್ರಜಾವಾಣಿ ವರದಿಗಾರರಾದ ಪಿ.ಕೃಷ್ಣಾ, ದಿ.ಪ್ರಹ್ಲಾದಾಚಾರ್ಯ ಜೋಷಿ ಸ್ಮರಣಾರ್ಥ ಗ್ರಾಮೀಣ ಪ್ರಶಸ್ತಿ ಸ್ಟಾರ್ ಆಫ್ ರಾಯಚೂರು ದೇವದುರ್ಗ ವರದಿಗಾರ ಗುರುನಾಥ ಇಂಗಳದಾಳ, ದಿ. ಪ್ರಹ್ಲಾದಾಚಾರ್ಯ ಜೋಷಿ ಸ್ಮರಣಾರ್ಥ ನಗರ ಪ್ರಶಸ್ತಿಯನ್ನು ಉರ್ದು ಮುನ್ಸಿಫ್ ಪತ್ರಿಕೆಯ ವರದಿಗಾರರಾದ ಇಮ್ತಿಯಾಜ್ ಆಲಂ ಹುಸೇನಿ, ದಿ.ಮಹಾದೇವಮ್ಮ ಬಸವರಾಜ ಸ್ವಾಮಿ ಸ್ಮರಣಾರ್ಥ ಪ್ರಶಸ್ತಿ ಜನವಾದಿ ಮಾನ್ವಿ ವರದಿಗಾರ ಅಬ್ದುಲ್ ಗಯಾಸ್, ಈಶ್ವರಮ್ಮ ನರಸಪ್ಪ ಜಲ್ದಾರ್ ಸ್ಮರಣಾರ್ಥ ಪ್ರಶಸ್ತಿ ಮುದುಗಲ್ ಪ್ರಜಾವಾಣಿ ವರದಿಗಾರ ಡಾ.ಶರಣಪ್ಪ ಆನೆಹೊಸೂರು, ಸ್ಪಂದನಾ ಸಂಸ್ಥೆ ನಂದಿಕೋಲು ಮಠ ಪ್ರಾಯೋಜಿತ ಪ್ರಶಸ್ತಿ ಬಳಗನೂರು ರಾಯಚೂರುವಾಣಿ ವರದಿಗಾರ ಶ್ರೀಧರ್ ಕೊಂಡ, ಸಿದ್ದಪ್ಪ ಅಳ್ಳೂರು ಸಿರವಾರ ಪ್ರಾಯೋಜಿತ ಪ್ರಶಸ್ತಿ ಪಬ್ಲಿಕ್ ಟಿವಿ ಕ್ಯಾಮೆರಾಮ್ಯಾನ್ ಯಲ್ಲುಲಿಂಗ ಅವರಿಗೆ ನೀಡಲಾಗಿದೆ.
ಗೌರವ ಸನ್ಮಾನವನ್ನು ಜಾಹೀರಾತು ವಿಭಾಗದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹಿರಿಯ ಪ್ರತಿನಿಧಿ ಕೃಷ್ಣಾ ಇನಂದಾರ್, ಪ್ರಸರಣ ವಿಭಾಗದಿಂದ ವಿಜಯ ಕರ್ನಾಟಕ ದಿನ ಪತ್ರಿಕೆಯ ಚನ್ನಬಸವ ಹಿರೇಮಠ, ಪತ್ರಿಕಾ ವಿತರಕ ವಿಭಾಗದಿಂದ ಮಸ್ಕಿಯ ಮಲ್ಲಯ್ಯ ಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತದೆ. ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ ನೀಡುವ ಪ್ರಶಸ್ತಿಗಳನ್ನು ಗಿಲ್ಡ್ ಅಧ್ಯಕ್ಷರಾದ ಚನ್ನಬಸವಣ್ಣ ಅವರು ಪ್ರಕಟಿಸಿದರು. ದಿ.ಎಂ.ಕೆ.ಕುಲಕರ್ಣಿ ಸ್ಮರಣಾರ್ಥ ಪ್ರಾಯೋಜಿತ ಪ್ರಶಸ್ತಿ ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಜಗನ್ನಾಥ ಪೂಜಾರಿ, ದಿ.ಎಂ.ಕೆ.ಕುಲಕರ್ಣಿ ಸ್ಮರಣಾರ್ಥ ಪ್ರಾಯೋಜಿತ ಪ್ರಶಸ್ತಿಯನ್ನು ನ್ಯೂಸ್ ೧೮ ಉರ್ದು ಜಿಲ್ಲಾ ವರದಿಗಾರ ಸೈಯದ್ ನಸೀಮ್ ಅಶ್ರಫ್, ದಿದ್ದಿಗಿ ಕಿಶನರಾವ್ ಸ್ಮರಣಾರ್ಥ ಪ್ರಶಸ್ತಿಯನ್ನು ಪ್ರಜಾವಾಣಿ ಸಹಾಯಕ ವರದಿಗಾರ ಬಾವಸಲಿ, ಬೊಮ್ಮನಹಾಳ ರಘುನಾಥ ಸಿಂಗ್ ಸ್ಮರಣಾರ್ಥ ಪ್ರಶಸ್ತಿಯನ್ನು ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಅಮರೇಶ ಎನ್.ಕೆ., ಪತ್ರಕರ್ತ ಪ್ರಕಾಶ ಮಸ್ಕಿ ಪ್ರಾಯೋಜಿತ ಛಾಯಾಗ್ರಾಹಕ ಪ್ರಶಸ್ತಿ ವಿಡಿಯೋ ಜರ್ನಾಲಿಸ್ಟ್ ಸುವರ್ಣ ನ್ಯೂಸ್ ಶ್ರೀನಿವಾಸ ಅವರಿಗೆ ನೀಡಲಾಗಿದೆ. ದಿ.ಹನುಮಂತ್ರಾಯ ಗೌಡ ಸ್ಮರಣಾರ್ಥ ಪ್ರಶಸ್ತಿಯನ್ನು ರಾಜ್ ನ್ಯೂಸ್ ಜಿಲ್ಲಾ ವರದಿಗಾರ ಸುರೇಶ ರೆಡ್ಡಿ ಅವರಿಗೆ ಹಾಗೂ ದಿ.ಕೆ.ಅಡಿವೆಪ್ಪ ಸ್ಮರಣಾರ್ಥ ವಿಜಯ ಕರ್ನಾಟಕ ವರದಿಗಾರ ರಾಚಯ್ಯಸ್ವಾಮಿ ಮಾಚನೂರು ಅವರಿಗೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಎಂ.ಪಾಷಾ ಹಟ್ಟಿ, ವಿಜಯ ಜಾಗಟಗಲ್, ಶಿವಪ್ಪ ಮಡಿವಾಳ ಉಪಸ್ಥಿತರಿದ್ದರು.