
ವಿಜಯಪುರ:ಮೇ.24: “ಅರಿವೇ ಸತ್ಕುಲ, ಮರೆವೇ ದು;ಕುಲ” ಎಂಬ ಸಂದೇಶವನ್ನು ಸಾರಿದ ಹಾವಿನಹಾಳ ಕಲ್ಲಯ್ಯನವರು ಶರಣರ ಪರಂಪರೆಯಲ್ಲಿ ಗುರುಭಕ್ತಿ, ಕ್ರಿಯೆ ಮತ್ತು ಜ್ಞಾನ, ನಿರಪೇಕ್ಷ ಜೀವನ ಸಿದ್ಧಾಂತವನ್ನು ತಮ್ಮ ವಚನಗಳ ಮೂಲಕ ಕಟ್ಟಿಕೊಟ್ಟ ಅನುಭಾವಿಗಳೇ ಆಗಿದ್ದಾರೆ ಎಂದು ಸಾಹಿತಿ ಮನು ಪತ್ತಾರ ಅಭಿಪ್ರಾಯಪಟ್ಟರು.
ಅವರು ವಿಜಯಪುರ ನಗರದ ಓದುಗರ ಚಾವಡಿ ಆಶ್ರಯದಲ್ಲಿ, ಜಿಲ್ಲಾ ಸರಕಾರಿ ನೌಕರರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕೃತಿಗಳ ಬಿಡುಗಡೆ ಹಾಗೂ ಇಪ್ಪತ್ತೆಂಟನೆಯ ಮಾಸಿಕ ಕೃತಿ ಚಿಂತನೆ ಉಪನ್ಯಾಸದಲ್ಲಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಎಂ.ಎಸ್. ಮಾಗಣಗೇರಿರವರು ಬರೆದ “ಹಾವಿನಹಾಳ ಕಲ್ಲಯ್ಯ” ಕೃತಿಯನ್ನು ಪರಿಚಯಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡಿ, ಬಸವ ಚಳುವಳಿಯ ಬೆನ್ನ ಹಿಂದಿನ ಬೆಳಕಾದ ಕಲ್ಲಯ್ಯನವರು ಸೊನ್ನಲಿಗೆಯ ಸಿದ್ದರಾಮೇಶ್ವರರರನ್ನು ಜ್ಞಾನದ ಗುರುವಾಗಿ ಸ್ವೀಕರಿಸಿ ಬಸವ ಸೆಲೆಯನ್ನು ತಮ್ಮ ವಚನಗಳ ಮೂಲಕ ಬಿತ್ತರಿಸಿದರು. ಹಾವಿನಾಳ ಕಲ್ಲಯ್ಯನವರು ಸಿದ್ದರಾಮ ಶಿವಯೋಗಿಗಳೊಂದಿಗೆ ಸೇರಿ ಲೋಕಕಲ್ಯಾಣದ ಅಭ್ಯುದಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಬಗೆಯನ್ನು ಡಾ ಎಂ ಎಸ್ ಮಾಗಣಗೇರಿ ಅವರು ತಮ್ಮ “ಹಾವಿನಹಾಳ ಕಲ್ಲಯ್ಯ” ಪುಸ್ತಕದಲ್ಲಿ ಸಾದ್ಯಂತವಾಗಿ ವಿವರಿಸಿದ್ದಾರೆ ಎಂದು ನುಡಿದರು.
ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಟಿ. ಮೇರವಾಡೆ “ಆಡಿನ ಹಿಕ್ಕಿ ಲಿಂಗವಾದುದಿಲ್ಲವೇ” ಶೀರ್ಷಿಕೆಯ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ಈ ಕೃತಿಯು ಗಾತ್ರದಲ್ಲಿ ತುಸು ಕಿರಿದಾದರೂ ಪುಸ್ತಕವು ಅತ್ಯಂತ ಹಿರಿದಾದ ಅರ್ಥವನ್ನು ಒಳಗೊಂಡಿದೆ. ಅದರಲ್ಲೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಹುಸೂಕ್ತ ಮತ್ತು ಉಪಯುಕ್ತ ಸಂಪನ್ಮೂಲವಾಗಿದೆ.ಶರಣರ ಚರಿತ್ರೆಯನ್ನು ಸಂಶೋಧನಾತ್ಮಕ ನೆಲೆಯಲ್ಲಿ ಕಟ್ಟಿಕೊಡುವ ಡಾ ಎಂ ಎನ್ ಮಾಗಣಗೇರಿ ಅವರ ಕಾರ್ಯವು ಹೀಗೆ ನಿರಂತರವಾಗಿ ಸಾಗಲಿ ಎಂದು ಆಶಿಸುವೆ ಎಂದು ನುಡಿದರು.
ಬಾಲಕರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ “ಹಾವಿನಹಾಳ ಕಲ್ಲಯ್ಯ” ಕೃತಿ ಬಿಡುಗಡೆ ಮ ಮಾಡಿ ಮಾತನಾಡಿ, ಇವತ್ತಿನ ವಿದ್ಯಾರ್ಥಿಗಳು ಮೊಬೈಲ್ ದಾಸರಾಗಿ ತಮ್ಮ ಅಮೂಲ್ಯ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಇಂಗ್ಲಿಷ್ ಸಂಸ್ಕøತಿಗೂ ಮಾರುಹೋಗಿ ನಮ್ಮ ಮೂಲ ನೆಲೆಯನ್ನು ಮರೆಯುತ್ತಿದ್ದಾರೆ. ಎರಡನ್ನೂ ಧಿಕ್ಕರಿಸಿ ಓದಿನ ಮಹತ್ವ ಮತ್ತು ನಮ್ಮ ಸಂಸ್ಕøತಿ ಹಾಗೂ ಪರಂಪರೆಯನ್ನು ಕೃತಿಗಳ ಮೂಲಕ ಮನೆ-ಮನಕೂ ತಲುಪಿಸುವ, ಮೌಲ್ಯಗಳನ್ನು ಜೀವಂತವಾಗಿರಿಸುವ ಪವಿತ್ರ ಕಾಯಕದಲ್ಲಿ ಚಾವಡಿ ತೊಡಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ನುಡಿದರು.
ವೇದಿಕೆಯ ಮೇಲೆ ಲೇಖಕ ಡಾ.ಎಂ.ಎಸ್. ಮಾಗಣಗೇರಿ, ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ವೈದ್ಯಾಧಿಕಾರಿಗಳಾದ ಡಾ.ದೀಪಮಾಲಾ ಪಾಟೀಲ, ಇಂಗ್ಲಿಷ್ ಉಪನ್ಯಾಸಕ ಎಚ್. ಎಲ್.ದೊಡಮನಿ, ಓದುಗರ ಚಾವಡಿ ಅಧ್ಯಕ್ಷ ಬಿ.ಆರ್.ಬನಸೋಡೆ, ಜಿಲ್ಲಾ ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಮತ್ತಿತರರು ಇದ್ದರು.
ಈ ಕಾರ್ಯಕ್ರಮದಲ್ಲಿ ಡಾ.ರಾಜಕುಮಾರ ಜೊಳ್ಳಿ, ಅನಿಲ್ ಮಾಶಾಳಕರ, ಕೇಶವ ಕುಲಕರ್ಣಿ, ರಮೇಶ ಚವ್ಹಾಣ, ದಾಕ್ಷಾಯಣಿ ಬಿರಾದಾರ, ಸುನೀತಾ ಉಮರಾಣಿ,ಶರಣಗೌಡ ಪಾಟೀಲ, ಗುರು ಹಿರೇಮಠ, ಸುಭಾಸ ಯಾದವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಮಕೃಷ್ಣ ಉತ್ತೂರ ಪ್ರಾರ್ಥಿಸಿದರು. ರಾಜಶೇಖರ ಉಮರಾಣಿ ನಿರೂಪಿಸಿದರು. ಬಸವರಾಜ ಕುಂಬಾರ ಸ್ವಾಗತಿಸಿದರು. ಯು.ಎನ್.ಕುಂಟೋಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವಲಿಂಗ ಕಾಂಬಳೆ ವಂದಿಸಿದರು. ರಾಜೇಂದ್ರಕುಮಾರ್ ಬಿರಾದಾರ್ ನಿರ್ವಹಿಸಿದರು.