
ಆಫಜಲಪುರ –ಮಾ.10; ಭಾರತ ಕೃಷಿ ಪ್ರಧಾನವಾದ ದೇಶ. ಉತ್ತಮ ಕೃಷಿಯಿಂದ ದೇಶಾಭಿವೃದ್ಧಿ ಸಾಧ್ಯ. ಅನ್ನ ನೀರು ಗಾಳಿ ಮನುಷ್ಯನಿಗೆ ಬೇಕೇ ಬೇಕು. ಆರೋಗ್ಯ ಭಾಗ್ಯ ನಿಜವಾದ ಸಂಪತ್ತು. ಜೀವನ ಸಮೃದ್ದಿಗೆ ಕೃಷಿ ಮತ್ತು ಆರೋಗ್ಯ ಬಹಳ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ತಾಲೂಕಿನ ಬಡದಾಳ ತೇರಿನ ಮಠದ ಡಾ.ಅಭಿನವ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳವರ 60ನೇ ವರ್ಷದ ಜನ್ಮ ದಿನೋತ್ಸವ ಅಂಗವಾಗಿ ಜರುಗಿದ ಕೃಷಿ ಮೇಳ ಮತ್ತು ಆರೋಗ್ಯ ಶಿಬಿರ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಬಹು ಜನ್ಮದ ಪುಣ್ಯ ಫಲದಿಂದ ಮಾನವ ಜೀವನ ಪ್ರಾಪ್ತವಾಗಿದೆ. ಅರಿವು ಆದರ್ಶಗಳ ಮೂಲಕ ಬದುಕು ಸಮೃದ್ಧಗೊಳ್ಳಬೇಕು. ಮನುಷ್ಯ ಎಷ್ಟು ವರುಷ ಬದುಕಿದನೆಂಬುದು ಮುಖ್ಯವಲ್ಲ. ಬದುಕಿರುವಷ್ಟು ದಿನ ಹೇಗೆ ಬಾಳಿದನೆಂಬುದು ಮುಖ್ಯ. ತೇರಿನಮಠದ ಡಾ|| ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು ಶಿಥಿಲಗೊಂಡ ಮಠವನ್ನು ಪುನರ್ ನಿರ್ಮಾಣ ಮಾಡಿ ಭಕ್ತರ ಬಾಳಿಗೆ ಬೆಳಕು ತೋರಿದ್ದಾರೆ. ಸಂಸ್ಕಾರ ಸಂಸ್ಕೃತಿಯ ಕಾರ್ಯ ಕೈಕೊಂಡ ಶ್ರೀಗಳವರು ಸಾತ್ವಿಕ ಹೃದಯವಂತರಾಗಿದ್ದು ಗುರು ವಂಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಅವರಿಗೆ 60 ವರುಷ ತುಂಬಿದ ಸಂದರ್ಭದಲ್ಲಿ ಕೃಷಿ ಮೇಳ ಮತ್ತು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ರೀಗಳವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ರೈತರು ಆಧುನಿಕ ಕೃಷಿ ಅನುಸರಿಸಬೇಕಾಗುತ್ತದೆ. ಹಳ್ಳಿಗಳಲ್ಲಿ ಭೂ ತಾಯಿ ಸೇವೆ ಮಾಡುವ ಜನ ಕಡಿಮೆಯಾಗುತ್ತಿದ್ದು ನಗರಕ್ಕೆ ವಲಸೆ ಹೊರಟಿದ್ದಾರೆ. ಭೂಮಿ ತಾಯಿಗೆ ಬೆವರು ಸುರಿಸಿ ದುಡಿದರೆ ಭೂ ತಾಯಿ ಯಾರನ್ನೂ ಕೈ ಬಿಡುವುದಿಲ್ಲ. ಧರ್ಮ ಸಾಧನೆಗೆ ಶರೀರ ಸಮೃದ್ಧವಾಗಿರಬೇಕು. ಕಲಬೆರಕೆ ಆಹಾರ ಸೇವನೆಯಿಂದ ಹಲವಾರು ರೋಗಗಳು ಬರುತ್ತಿವೆ. ಸಾವಯವ ಕೃಷಿಗೆ ಹೆಚ್ಚು ಗಮನ ಹರಿಸಿದರೆ ರೋಗದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ದೇಶದ ಅಭಿವೃದ್ಧಿಗೆ ಕೃಷಿ ಮತ್ತು ಆರೋಗ್ಯ ಎರಡೂ ಮುಖ್ಯವಾಗಿದೆ. ಇವುಗಳ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ ಎಂದರು.ಸಮಾರಂಭವನ್ನು ಶಾಸಕ ಎಂ.ವೈ.ಪಾಟೀಲ ಉದ್ಘಾಟಿಸಿ ಮಾತನಾಡಿದರು. ನೇತೃತ್ವ ವಹಿಸಿದ ಡಾ|| ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನನ್ನ 60ನೇ ವರ್ಷದ ಷಷ್ಠಿಪೂರ್ತಿ ಸಮಾರಂಭ ಜರುಗುತ್ತಿರುವುದು ಈ ಭಾಗದ ಭಕ್ತರ ಸೌಭಾಗ್ಯ. ಶ್ರೀ ಮಠದ ಅಭಿವೃದ್ಧಿಗೆ ಮತ್ತು ಭಕ್ತರಿಗೆ ಸಂಸ್ಕಾರ ಸಂಸ್ಕೃತಿ ಅರುಹುದರ ಮೂಲಕ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಿದ ಸಂತೃಪ್ತಿ ಭಾವನೆ ನಮ್ಮದಾಗಿದೆ. ಭಕ್ತ ಸಮುದಾಯದ ಸಹಕಾರ ಮತ್ತು ಜಗದ್ಗುರುಗಳ ಆಶೀರ್ವಾದದಿಂದ ಭವಿಷ್ಯತ್ತಿನ ದಿನಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಸಂಕಲ್ಪ ನಮ್ಮದಾಗಿದೆ ಎಂದರು. 60ನೇ ವರುಷದ ಜನ್ಮ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ರೇಶ್ಮೆ ಮಡಿ ಹೊದಿಸಿ ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು. ಅನೇಕ ಗಣ್ಯರು ಮತ್ತು ಧರ್ಮಾಭಿಮಾನಿಗಳಿಗೆ ಗುರುರಕ್ಷೆ ಜರುಗಿತು.