ಜೀವನ ಸತ್ಯ ಅರಿಯಲು ರಾಜಯೋಗ ಅಗತ್ಯ: ಮಯೂರಕುಮಾರ ಗೋರ್ಮೆ

ಬೀದರ್:ಎ.30: 15ರಿಂದ 29 ವರ್ಷದ ಒಳಗಿರುವ ಯುವಜನರು ತಮ್ಮ ಜೀವನದ ಸತ್ಯ ಅರಿತುಕೊಳ್ಳಬೇಕಾದರೆ ನಿತ್ಯ ಸತ್ಸಂಗ ಸಮಾಗಮ, ಅವರ ಮಾರ್ಗದರ್ಶನದ ಜೊತೆಗೆ ಬ್ರಹ್ಮಾಕುಮಾರಿ ಕೇಂದ್ರದಲ್ಲಿ ಭಾಗಿಯಾಗಿ ಅಲ್ಲಿಯ ರಾಜಯೋಗ ಶಿಬಿರದ ಲಾಭ ಪಡೆದುಕೊಳ್ಳುವಂತೆ ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರ್ಮೆ ತಿಳಿಸಿದರು.

ಭಾನುವಾರ ನಗರದ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದಲ್ಲಿ ಯುವ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾನು 2016ರಿಂದ ಬ್ರಹ್ಮಾಕುಮಾರಿ ಕೇಂದ್ರದ ಸಂಪರ್ಕದಲ್ಲಿದ್ದೇನೆ. ಇಲ್ಲಿಯ ಜ್ಞಾನ ಪಡೆದುಕೊಂಡಿರುವುದರಿಂದ ಹಾಗೂ ಅಲ್ಲಿಯ ಸತ್ಯ ಅರಿತ ಕಾರಣ ನಾನಿಂದು ಈ ಸ್ಥಾನದಲ್ಲಿದ್ದೇನೆ. ಪ್ರತಿಯೊಬ್ಬರಿಗೆ ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಹಾಗೂ ಅದನ್ನು ಸಾಧಿಸಲು ಗುರುವಿನ ಮಾರ್ಗದರ್ಶನ ಪಡೆಯಬೇಕು. ಸದಾ ಧನಾತ್ಮಕ ಚಿಂತನೆ ಹಾಗೂ ಸಕಾರಾತ್ಮಕ ಮನೋಭಾವ, ಸಹಕಾರ, ಸಹಾನೂಭುತಿ, ಸದುವಿನಯ, ಸದಾಚಾರ, ಸದ್ಬುದ್ದಿ ಈ ಸಪ್ತ ಗುಣಗಳು ನಮ್ಮ ಬದುಕು ಸುಂದರವಾಗಿಸುವವು ಎಂದರು.

ನೆಹರು ಯುವ ಕೇಂದ್ರ ಭಾರತ ಸರಕಾರದ ಯುವ ಸಬಲೀಕರಣ ಸಂಸ್ಥೆಯಾಗಿದ್ದು, ಯುವಜನರಲ್ಲಿ ಸಾಂಸ್ಕøತಿಕ, ಕ್ರೀಡಾ ಮನೋಭಾವ, ಸಾಹಸ ಚಟುವಟಿಕೆ ಹೆಚ್ಚಸಲು ಸಾಂಸ್ಕøತಿಕ ಕಾರ್ಯಕ್ರಮ, ಕ್ರೀಡಾ ಸ್ಪರ್ದೆ, ಸಾಹಸ ಕಾರ್ಯಕ್ರಮ, ಯುಚ ಸಂಸತ್ತು, ಯುವ ಸಬಲೀಕರಣ, ಆತ್ಮ ನಿರ್ಭರ ಭಾರತ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯ ಯುವಜನರನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದೆ ಎಂದರು.

ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹೆನ್ ಮಾತನಾಡಿ, ಲೌಕಿಕ ಜಗತ್ತಿನಲ್ಲಿ ನಿತ್ಯ ನಾವು ವ್ಯಕ್ತಿ, ಆತನ ಕರ್ಮ, ಜೀವನ ವಿಧಾನ, ಆತನ ಹಾವ, ಭಾವಗಳಿಗೆ ಆಕರ್ಶಿತನಾಗಿ ತನ್ನೊಳಗಿನ ಶಕ್ತಿ ಮರೆತು ಹೋಗುತ್ತೇವೆ. ನಮ್ಮಲ್ಲಿ ಒಂದು ಅಗೋಚರ ಶಕ್ತಿ ಅಡಗಿದೆ ಎಂಬ ಸತ್ಯ ಅರಿಯಲು ಆತ್ಮಜ್ಞಾನ ಅಗತ್ಯ. ಅದು ಪರಮಾತ್ಮನ ನೆಲೆ ಸಹ ಗುರ್ತಿಸಲು ಪ್ರೇರೆಪಿಸುತ್ತದೆ. ವಿಶ್ವವೆಂಬ ರಂಗಮಂಟಪದಲ್ಲಿರುವ ಪಾತ್ರಧಾರಿಗಳಾದ ನಾವು ಒಳ್ಳೆಯದನ್ನು ತೋರಿಸುವ ಹಾಗೂ ನಮ್ಮತನದಿಂದ ಜಗತ್ತನ್ನು ಆಕರ್ಶಿಸುವ ಮನೋಭಾವ ಯುವಜನರು ಬೆಳೆಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು. ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಇಡೀ ಶಿಬಿರದ ವಿವರಣೆ ಹಾಗೂ ವೇಳಾಪಟ್ಟಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಸಹೋದರಿಯರಾದ ಬಿ.ಕೆ ರಾಧಾ, ಬಿ.ಕೆ ಸುಮನ, ಬಿ.ಕೆ ಮಂಗಲಾ, ಬಿ.ಕೆ ವಿಜಯಲಕ್ಷ್ಮೀ, ಬಿ.ಕೆ ಸವಿತಾ, ಬಿ.ಕೆ ರೇಣುಕಾ ಸೇರಿದಂತೆ ಕೇಂದ್ರದ ಇತರೆ ಶಾಖೆಗಳ ಸಂಚಾಲಕರು, ಯುವಜನರು ಕಾರ್ಯಕ್ರಮದಲ್ಲಿದ್ದರು. ಕು.ವರ್ಷಾ ಸ್ವಾಗತ ನೃತ್ಯಗೈದರು.