ಜೀವನ ಶ್ರೇಯಸ್ಸಿಗೆ ಧರ್ಮಾಚರಣೆ ಮೂಲ :  ರಂಭಾಪುರಿ ಶ್ರೀ 

????????????

ಸಂಜೆವಾಣಿ ವಾರ್ತೆ

ಸಕಲೇಶಪುರ.1; ಜನ್ಮ ಜನ್ಮಗಳ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಜೀವನದ ಉನ್ನತಿಗೆ ಬದುಕಿನ ಶ್ರೇಯಸ್ಸಿಗೆ ಧರ್ಮಾಚರಣೆ ಮೂಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಯಸಳೂರು ತೆಂಕಲಗೂಡು ಬೃಹನ್ಮಠದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದಾಯಕ ಶಾಂತಿ ನೆಮ್ಮದಿಯ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಬಹಳಷ್ಟು ಮುಖ್ಯ. ಅರಿವು ಆಚರಣೆಗಳನ್ನು ಮೈಗೂಡಿಸಿಕೊಂಡು ಬಾಳಿದರೆ ಜೀವನ ಉಜ್ವಲಗೊಳ್ಳುವುದು. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಸಾಮರಸ್ಯ ಸೌಹಾರ್ದತೆಯ ಅಮೂಲ್ಯ ಬೋಧಾಮೃತವನ್ನು ಬೋಧಿಸಿದ್ದಾರೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಸಕಲರ ಬಾಳಿನ ಉತ್ಕರ್ಷತೆಗೆ ಕಾರಣವಾಗಿವೆ. ಮಾನವೀಯ ಆದರ್ಶ ಮೌಲ್ಯಗಳನ್ನು ವೀರಶೈವ ಧರ್ಮ ಎತ್ತಿ ಹಿಡಿದಿದೆ. ಜಾತಿ ಜನಾಂಗಗಳ ಗಡಿ ಮೀರಿ ಸರ್ವರ ಒಳಿತಿಗಾಗಿ ಸದಾ ಶ್ರಮಿಸಿದೆ. ವೀರಶೈವ ಧರ್ಮ ವೃಕ್ಷದ ಮೂಲ ಪರಮಾಚಾರ್ಯರಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಮ್ಮಿಕೊಂಡಿರುವುದು ತಮಗೆ ಸಂತಸ ತಂದಿದೆ ಎಂದ ಅವರು ಲಿಂ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ತೆಂಕಲಗೂಡು ಬೃಹನ್ಮಠದ ಉನ್ನತಿಗಾಗಿ ಶ್ರಮಿಸಿದ್ದನ್ನು ನೆನಪಿಸಿದರು. ಇಂದಿನ ಚನ್ನಸಿದ್ದೇಶ್ವರ ಶ್ರೀಗಳು ಹಿಂದಿನ ಶ್ರೀಗಳ ಸತ್ಯ ಸಂಕಲ್ಪಗಳನ್ನು ಸಾಕಾರಗೊಳಿಸಿರುವುದು ಭಕ್ತ ಸಮೂಹಕ್ಕೆ ಸಂತೋಷ ತಂದಿದೆ ಎಂದರು. ನೇತೃತ್ವ ವಹಿಸಿದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಕಾಯಕ ಮತ್ತು ದಾಸೋಹಕ್ಕೆ ಪ್ರಾಮುಖ್ಯತೆ ಕೊಟ್ಟಿದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಮುಖ್ಯ. ಜಗದ ಕತ್ತಲೆ ಕಳೆಯಲು ಸೂರ್ಯ ಬದುಕಿನ ಕತ್ತಲೆ ಕಳೆಯಲು ಗುರು ಬೇಕು. ಲಿಂ. ಚನ್ನಮಲ್ಲಿಕಾರ್ಜುನ ಶ್ರೀಗಳವರು ಹಾಕಿದ ದಾರಿಯಲ್ಲಿ ಮುನ್ನಡೆದು ಶ್ರೀ ಮಠದ ಉನ್ನತಿಯನ್ನು ಮಾಡುತ್ತೇವೆ. ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಶ್ರೀರಕ್ಷೆ ಸದಾ ನಮಗಿರಲೆಂದರು. ಸಮ್ಮುಖ ವಹಿಸಿದ ಎಡೆಯೂರು ರೇಣುಕ ಶಿವಾಚಾರ್ಯರು, ಶನಿವಾರ ಸಂತೆ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಹೆಗ್ಗಡಹಳ್ಳಿಮಠದ ಷಡ್ಭಾವರಹಿತೇಶ್ವರ ಶಿವಾಚಾರ್ಯರು, ಪಾಲ್ಗೊಂಡು ಧರ್ಮ ಮತ್ತು ಗುರುವಿನ ಹಿರಿಮೆಯನ್ನು ಕೊಂಡಾಡಿದರು.