ಜೀವನ ಶೈಲಿ ಬದಲಾವಣೆಯಿಂದ ಆರೋಗ್ಯ ವೃದ್ಧಿ

ಚಿತ್ರದುರ್ಗ,ಏ.8; ಬದಲಾದ ಜೀವನ ಶೈಲಿ, ಕಡಿಮೆ ಗುಣಮಟ್ಟದ ಆಹಾರ ಸೇವನೆ, ವ್ಯಾಯಾಮ ರಹಿತ ಬದುಕು, ಉದ್ಯೋಗದ ಒತ್ತಡದಿಂದಾಗಿ ಆಸಾಂಕ್ರಾಮಿಕ ರೋಗಗಳಿಗೆ ಜನರು ಹೆಚ್ಚು ತುತ್ತಾಗುತ್ತಿದ್ದಾರೆ. ಪ್ರತಿಯೊಬ್ಬರು ಜೀವನ ಶೈಲಿ ಬದಲಾವಣೆಯಿಂದ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಡಾ.ಮುರುಳಿಕೃಷ್ಣ ಹೇಳಿದರು.
 ನಗರದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಬುಧವಾರ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮರ್ಪಕ ಆರೋಗ್ಯಕ್ಕಾಗಿ ಜಗತ್ತನ್ನು ಕಟ್ಟೋಣ ಎಂಬುದು ಈ ವರ್ಷದ ಘೋಷಣೆಯಾಗಿದ್ದು, ಶುದ್ಧ ಗಾಳಿ, ನೀರು ಹಾಗೂ ಪೌಷ್ಠಿಕ ಆಹಾರ ಸೇವಿಸಿ ಸರ್ವರೂ ಆರೋಗ್ಯ ಕಾಪಾಡಿಕೊಳ್ಳಬೇಕು. ಕೊರೊನಾ-19 ಸಾಂಕ್ರಾಮಿಕ ರೋಗ ತೊಲಗುವವರೆಗೂ ಆದಷ್ಟು ವೃದ್ಧರು, ಮಕ್ಕಳು, ಅನಾರೋಗ್ಯದಿಂದ ನರಳುತ್ತಿರುವವರು ಮನೆಯಲ್ಲಿಯೇ ಇರುವುದು ಒಳಿತು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಮಾತನಾಡಿ, ಪ್ರತಿ ವರ್ಷ ಏಪ್ರಿಲ್ 07ರಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಕಳೆದ ವರ್ಷದಿಂದ ಜಗತ್ತನ್ನು ತಲ್ಲಣಗೊಳಿಸಿದ್ದ ಕೊರೊನಾ ಸೋಂಕು ಇನ್ನೂ ಹತೋಟಿಗೆ ಬರುತ್ತಿಲ್ಲ. ಸಾರ್ವಜನಿಕರು ಜನಸಂದಣಿ ಸ್ಥಳಗಳಿಗೆ ತೆರಳದೇ, ಸದಾ ಮಾಸ್ಕ್, ಪರಸ್ಪರ ಅಂತರ ಕಾಯ್ದುಕೊಂಡು, ಆಗಾಗ್ಗೆ ಕೈ ತೊಳೆಯುವುದರ ಮೂಲಕ ರೋಗ ನಿಯಂತ್ರಣಕ್ಕಾಗಿ ಶ್ರಮಿಸಬೇಕು ಎಂದರು.
ಅನಿವಾರ್ಯವಾಗಿ ಸೋಂಕಿಗೆ ತುತ್ತಾದಲ್ಲಿ ಸಾರ್ವಜನಿಕರು ಆತಂಕ ಪಡಬಾರದು. ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆ ಹಾಗೂ ಚಿಕಿತ್ಸಾ ಸೌಲಭ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸವರಾಜ್, ಜಿಲ್ಲಾ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಕುಮಾರಸ್ವಾಮಿ, ಡಾ.ರೇಣುಪ್ರಸಾದ್, ಡಾ.ತುಳಸಿರಂಗನಾಥ್, ಡಾ.ಚಂದ್ರಶೇಖರ್ ಕಂಬಾಳಿಮಠ್, ಡಾ.ರಂಗನಾಥ್ ಸೇರಿದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.