ಜೀವನ ವಿಕಾಸಕ್ಕೆ ಜ್ಞಾನ ಅವಶ್ಯಕ : ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು.ನ.೯; ಮನುಷ್ಯ ಬದುಕಿ ಬಾಳಲು ಅನ್ನ ನೀರು ಗಾಳಿ ಬೆಳಕು ಬೇಕು. ಮನುಷ್ಯನ ಜೀವನ ಉಜ್ವಲಗೊಳ್ಳಲು ಶ್ರೀ ಗುರುವಿನ ಜ್ಞಾನ ಬೋಧಾಮೃತ ಅವಶ್ಯಕವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಪ್ರಾಪಂಚಿಕ ವಿಚಾರಗಳಿಂದ ಮನುಷ್ಯನ ಮನಸ್ಸು ಕಸದ ಬುಟ್ಟಿಯಂತಾಗಿದೆ. ಅಂತರAಗದಲ್ಲಿರುವ ದುರಾಶೆಯ ಕಸವನ್ನೆಲ್ಲ ಹೊರಗೆ ಹಾಕಿದಾಗ ಮಾತ್ರ ಪರಮ ಶಾಂತಿ ಪಡೆಯಲು ಸಾಧ್ಯವಾಗುತ್ತದೆ. ಮನಸ್ಸು ಹಸನಾಗಿದ್ದರೆ ಮನುಷ್ಯ ಬುದ್ಧ ಸಿದ್ಧನಾಗಲು ಸಾಧ್ಯ. ಇಲ್ಲದಿದ್ದರೆ ಭವ ಬಂಧನಕ್ಕೆ ಸಿಲುಕಬೇಕಾಗುತ್ತದೆ. ಬಾಳ ಬಂಡಿ ಸಾಗಲು ದೇಹ ಮತ್ತು ಮನಸ್ಸು ಎರಡೂ ಪೂರಕವಾಗಿರಬೇಕು. ದೇಹಕ್ಕೆ ಅನ್ನ ನೀರು ಮನಸ್ಸಿಗೆ ಶಾಂತಿ ಸಮಾಧಾನ ಬೇಕು. ಬದುಕಿಗೆ ಬೆಲೆ ಬರುವುದು ವಸ್ತು ಒಡವೆಗಳಿಂದಲ್ಲ. ಅರಿವಿನ ಸಂಕೇತ ದೀಪ. ಹೊರಗಿನ ಕತ್ತಲೆ ಕಳೆಯಲು ದೀಪ ಒಳಗಿರುವ ಅಜ್ಞಾನ ಕಳೆಯಲು ಗುರು ಜ್ಞಾನ ಬೋಧಾಮೃತ ಅವಶ್ಯಕ. ಕತ್ತಲೆ ನಂತರ ಬೆಳಕು ಬೆಳಕಿನ ನಂತರ ಕತ್ತಲೆ ಬರುವುದು ಸಹಜ. ಅದರಂತೆ ಸುಖ ದು:ಖಗಳು ಬರುತ್ತವೆ ಎಂಬುದನ್ನು ಮರೆಯಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಬೆಳಕಿನ ಸಂದೇಶ ಸರ್ವರ ಬಾಳಿನ ಉನ್ನತಿಗೆ ಸ್ಫೂರ್ತಿದಾಯಕವಾಗಿವೆ ಎಂದರು.ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀ, ಸಂಗೊಳ್ಳಿ ಗುರುಲಿಂಗ ಶ್ರೀ, ತಡವಲಗಾ ರಾಚೋಟೇಶ್ವರ ಶ್ರೀ, ಹನುಮನಹಳ್ಳಿ ಸೋಮಶೇಖರ ಶ್ರೀ, ಬನ್ನೂರು ಸಿದ್ಧಲಿಂಗ ಶ್ರೀ, ಗಂವ್ಹಾರ ವಿರೂಪಾಕ್ಷಲಿಂಗ ಶ್ರೀ, ಅರ್ಚಕ ರೇಣುಕಸ್ವಾಮಿ ಉಪಸ್ಥಿತರಿದ್ದರು.ಕಾರ್ತಿಕ ದೀಪಾರಾಧನೆ ಸೇವೆಯನ್ನು ಶಿಗ್ಗಾಂವಿಯ ಲಲಿತಾಬಾಯಿ ಕೋಂ ಶಿವಪುತ್ರಯ್ಯ ಸುರಗೀಮಠ ಹಾಗೂ ವಿದ್ಯುತ್ ದೀಪಾಲಂಕಾರ ಸೇವೆಯನ್ನು ಹುಬ್ಬಳ್ಳಿಯ ವೀರೇಶ ಪಾಟೀಲ ಹಾಗೂ ಬಾಳೆಹೊನ್ನೂರು, ಬಾಸಾಪುರ, ಕಡವಂತಿ ಸದ್ಭಕ್ತರು ನೆರವೇರಿಸಿದರು. ರಾಹುಗ್ರಸ್ಥ ಚಂದ್ರಗ್ರಹಣದ ನಂತರ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ನಡೆಯಿತು. ನಂತರ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಂಭ್ರಮದಿAದ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಜರುಗಿತು.