ಜೀವನ ಕೌಶಲ ಬೆಳೆಸಿಕೊಳ್ಳಿ

ಬೀದರ್: ವಿದ್ಯಾರ್ಥಿಗಳು ಜೀವನ ಕೌಶಲ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ವಿನಾಯಕ ಬಿ. ಕೊತಮೀರ ಸಲಹೆ ಮಾಡಿದರು.

ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜೀವನ ಕೌಶಲ ಆನ್‍ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾ ಪುರುಷರ ಆದರ್ಶಗಳನ್ನು ಪಾಲಿಸಬೇಕು. ಇತರರು ಅನುಕರಿಸುವಂತಹ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಯುವ ಶಕ್ತಿ ದೇಶದ ಅಮೂಲ್ಯ ಸಂಪತ್ತಾಗಿದೆ. ಹೀಗಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಇರಬೇಕು. ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

ನಿಮ್ಹಾನ್ಸ್ ವಿಭಾಗೀಯ ಅಧಿಕಾರಿ ಚೇತನಕುಮಾರ, ಜಿಲ್ಲಾಮಟ್ಟದ ಸಂಪನ್ಮೂಲ ವ್ಯಕ್ತಿ ಸಂತೋಷಕುಮಾರ ಹಾಗೂ ಸುಜಾತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಬೆಂಗಳೂರಿನ ನಿಮ್ಹಾನ್ಸ್ ಕೇಂದ್ರದ ಡಾ. ಪ್ರದೀಪ್, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಹೇಮಾವತಿ ಪಾಟೀಲ, ಪ್ರೊ. ಮಹೇಶಕುಮಾರ, ಪ್ರೊ. ಊರ್ವಶಿ ಕೋಡ್ಲಿ ಇದ್ದರು.

ಬಿ.ಎ, ಬಿ.ಎಸ್ಸಿ ಹಾಗೂ ಬಿ.ಕಾಂ ವಿದ್ಯಾರ್ಥಿಗಳು ಕಾರ್ಯಕ್ರಮದ ಲಾಭ ಪಡೆದುಕೊಂಡರು. ಕಾರ್ಯಕ್ರಮ ಅಧಿಕಾರಿ ಡಾ. ಸಂಜೀವಕುಮಾರ ತಾಂದಳೆ ವಂದಿಸಿದರು.

ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.