ಜೀವನೋಪಾಯಕ್ಕೆ ಮಾಡುವುದು ಕಾಯಕವಲ್ಲ: ನಾವದಗಿ ಶ್ರೀ

ಹುಣಸಗಿ,ನ.3-ಪಟ್ಟಣದ ಹೊಸಮಠದಲ್ಲಿ ಶ್ರೀ ಶಿವಲಿಂಗೇಶ್ವರ ಕರ್ತೃ ಗದ್ದುಗೆಗಳ ನಾಲ್ಕನೇ ವರ್ಷದ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಶರಣರ ಜೀವನ ದರ್ಶನ ಹಾಗೂ ನಾದೋಪಾಸಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾವದಗಿ ಬೃಹನ್ಮಮಠದ ರಾಜೇಂದ್ರ ಒಡೆಯರ ಅವರು, “ಯಾವುದೋ ಒಂದು ಸಿದ್ಧಿಸಿಕೊಳ್ಳಬೇಕೆಂದರೆ ಅದರ ಸ್ಪಷ್ಟ ಜ್ಞಾನ ಬೇಕು. ಸಂಕಲ್ಪ, ಸಾಧಿಸುವ ಸಾಮಥ್ರ್ಯ, ಪರಿಶ್ರಮ ಅತ್ಯಗತ್ಯ. ಜತೆಗೆ ಪೂರಕ ಪರಿಸರವೂ ಇರಬೇಕು. ಕನಸು ನನಸಾಗಿಸಿಕೊಳ್ಳಲು ಆಂತರ್ಯ ಹಾಗೂ ಬಾಹ್ಯ ಎದುರಾಗುವ ಅಡೆತಡೆಗಳನ್ನು ಎದುರಿಸುವ ಸಿದ್ಧತೆ ಬೇಕು. ಇದಕ್ಕಾಗಿ, ಜೀವನ ಸಿದ್ಧಿಸಿಕೊಂಡವರ ಮಾತುಗಳನ್ನು ಅನುಸರಿಸಬೇಕು. ಉತ್ಕøಷ್ಟ ಜೀವನ ನಡೆಸಿದ ಶರಣ ಸಂತರ ಮಾತುಗಳು ಜಗದ ತುಂಬ ಹರಡಿವೆ. ಆ ಮಾತುಗಳಲ್ಲಿ ಜ್ಞಾನದ ಬೆಳಕು ಕಾಣಬೇಕು. ಆಗಾಗ ಮೆಲುಕು ಹಾಕಬೇಕು. ಅದು ನಮ್ಮಲ್ಲಿ ರಕ್ತಗತವಾಗಿ ಸಾಧನೆಗೆ ಚೈತನ್ಯ, ಪ್ರೇರಣೆ ಸಿಗುತ್ತದೆ, ಜೀವನ ಪರಿವರ್ತಿಸುತ್ತದೆ. ನಾವು ಕ್ರಮಿಸುವ ಮಾರ್ಗ ಸುಲಭಗೊಳಿಸುತ್ತದೆ. ಜಗತ್ತಿನಲ್ಲಿ ಅತ್ಯಂತ ಪರಮೋಚ್ಛವಾದದ್ದು ಪಡೆಯಲು ಒಂದಿಷ್ಟು ಸುಂದರ ಮಾತು ಪಡೆಯಬೇಕು. ಪರಮಾತ್ಮನೆಡೆಗೆ ಹೋಗಲು ಈ ಮಾತುಗಳೇ ಸೋಪಾನವಾಗಬೇಕು ಚನ್ನಬಸವಣ್ಣನವರು, ಬಸವಣ್ಣನವರ ಚಿಕ್ಕ ವಚನಗಳೇ ನಿದರ್ಶನ. ‘ಮಾತೆಂಬುದು ಜ್ಯೋತಿಲಿರ್ಂಗ ‘ಎಂದರು ಬಸವಣ್ಣ. ಲಿಂಗದ ಪ್ರಕಾಶವೆ ಮಾತು. ಅಂಥ ಮಾತುಗಳನ್ನು ನಮ್ಮ ಶರಣ-ಸಂತರು ಎಲ್ಲೆಡೆ ಹರಡಿದ್ದಾರೆ. ಒಂದಿಷ್ಟು ಪಡೆದು ಅನುಭವಿಸಬೇಕು. ಪ್ರಾಪಂಚಿಕ ಜೀವನದಲ್ಲಿ ಮುಳುಗಿ ಹೋಗದಂತೆ ಜಾಗೃತಿ ವಹಿಸಬೇಕು. ಅದಕ್ಕಾಗಿ ಪಾರಮಾರ್ಥದ ಅರಿವು ಮೂಡಿಸಿಕೊಳ್ಳಲೇಬೇಕು. ಸಾಧಕರ ಮಾತುಗಳೇ ಅರಿವು ಮೂಡಿಸುವ ಸಾಧನವಾಗಬೇಕು. ಸಂಸಾರವೆಂಬುದೊಂದು ಗಾಳಿಯ ಸೊಡರು, ಸಿರಿ ಎಂಬುದೊಂದು ಸಂತೆಯ ಮಂದಿ, ಇದು ನೆಚ್ಚಿ ಕೆಡಬೇಡ…” ಬಸವಣ್ಣನವರ ಈ ಸಣ್ಣ ಮಾತಿನಲ್ಲಿ ಜೀವನದ ದರ್ಶನ ಅಡಗಿದೆ. ಸಂತೆಯಲ್ಲಿ ಬಂದು ಮಾಯವಾಗುವ ಜನರಂತೆ ಸಂಪತ್ತು ಕೂಡ ಶಾಶ್ವತವಲ್ಲ. ಈ ಸಂತೆ ನೆಚ್ಚಿ ಕೆಡಬೇಡ ಎಂದು ಎಚ್ಚೆತ್ತುಕೊಳ್ಳಲು ತಿಳಿಸಿದ್ದಾರೆ. ಇದೆಲ್ಲ ವೈಭವ ಜೀವನದ ಸತ್ಯವನ್ನು ಮರೆಸುತ್ತದೆ. ಸಂಸಾರ ಗಾಳಿಯಲ್ಲಿ ಉರಿಯುವ ದೀಪದಂತೆ. ಸಂಸಾರ, ಸಂಪತ್ತು ಇರಬೇಕು. ಆದರೆ, ಸದಾ ನಮ್ಮೊಂದಿಗೆ ಇರಬೇಕು ಎಂದು ಬೀಗದೆ ಸ್ಥಿರತೆ ಕಾಪಾಡಿಕೊಳ್ಳುವುದೇ ಜೀವನ. ಆಯುಷ್ಯ ಅರ್ಧಕ್ಕೆ ಮೊಟಕಾಗಬಹುದು. ಇಂಥದೊಂದು ಶರಣರ ಚಿಕ್ಕ ಮಾತು ಪಾರಮಾರ್ಥದ ಬದುಕನ್ನು ದೃಢಗೊಳಿಸುತ್ತದೆ” ಎಂದರು.
ನಂತರ ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದ ಬಸವರಾಜ ಬಂಟನೂರ್, ಹಾಗೂ ತಬಲಾ ವಾದಕ ಈಶ್ವರ್ ಬಡಿಗೇರ್ ಮತ್ತು ಸಂಗೀತ ಕಲಾತಂಡಗಳಿಂದ ಭಕ್ತಿಗೀತೆ, ಭಾವಗಿತೇ,ಜಾನಪದ ಗೀತೆಗಳ ಜಾತ್ರೆಯ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಹೊಸಮಠದ ಎಲ್ಲಾ ಗುರು ಮತ್ತು ಶಿಷ್ಯರು, ಊರಿನ ಎಲ್ಲಾ ಸದ್ಭಕ್ತರು ಹಾಜರಿದ್ದರು.