ಜೀವನದಿ ತುಂಗಾಭದ್ರೆಯ ಒಡಲು ಖಾಲಿ ! ಖಾಲಿ !!

ಹರಿಹರ ನಗರದ ಸಮೀಪ ಹರಿಯುವ ತುಂಗಾಭದ್ರಾ ನದಿ ಈ ಪ್ರದೇಶದ ಜನರ ಜೀವನದಿ. ಶಿವಮೊಗ್ಗ ಜಿಲ್ಲೆಯಿಂದ ವಿಜಯನಗರ ಜಿಲ್ಲೆಯ ತುಂಗಾಭದ್ರಾ ಆಣೆಕಟ್ಟಿನವರೆಗೂ ತುಂಬಿ ಹರಿಯುತ್ತಿದ್ದ ನದಿ ಈಗ ಬತ್ತಿಹೋಗಿದೆ. ಸಾವಿರಾರು ರೈತರ ಕೃಷಿಭೂಮಿಗೆ ದಿನದ 24 ತಾಸು ನೀರುಣಿಸುತ್ತಿದ್ದ ತಾಯಿ ತುಂಗಾಭದ್ರೆಯಲ್ಲಿ ಇತ್ತೀಚೆಗೆ ನೀರು ಇಳಿಮುಖವಾಗಿತ್ತು. ಆದರೆ ಈಗ ಸಂಪೂರ್ಣ ಬತ್ತಿಹೋಗಿದೆ. ಕುಡಿಯುವ ನೀರಿಗೂ ತತ್ವಾರವಾಗಿದೆ.ಬಿಸಿಲಿನಬೇಗೆಯನ್ನು ಸಹಿಸಿಕೊಳ್ಳದ ನದಿಯ ಒಡಲು ಖಾಲಿಯಾಗಿದೆ. ಇದರಿಂದ ನದಿಯ ಹತ್ತಿರದ ಕೆರೆ ಬಾವಿಗಳಲ್ಲೂ ನೀರಿನ ಕೊರತೆಯಾಗಿದೆ. ಅನೇಕ ರೈತರು ಬತ್ತವನ್ನು ನಾಟಿ ಮಾಡಿಲ್ಲ. ಈ ವಾರ ಮಳೆ ಬಾರದಿದ್ದರೆ ನೀರಿಗಾಗಿ ಏನೆಲ್ಲಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಒಂದೆಡೆ ನದಿಯ ಒಡಲಲ್ಲಿ ದೇವರ ಭಗ್ನ ವಿಗ್ರಹಗಳು, ಪೂಜೆಯ ಸಾಮಾಗ್ರಗಳು, ಇನ್ನೊಂದೆಡೆ ಬೇಡವಾದ ಘನತ್ಯಾಜ್ಯ ನದಿಗೆ ಬರುತ್ತಿರುವುದು, ಇದನ್ನು ಬಿಟ್ಟರೆ ನೀರಿಲ್ಲದ ಕಾರಣ ಯಾವ ಜಲಚರಿಗಳಿಲ್ಲ. ನದಿ ಪಾತ್ರದಲ್ಲಿ ಮಳೆಯಿಲ್ಲದ ಕಾರಣ ಬರಿದಾಗುತ್ತಿರುವ ತುಂಗಾಭದ್ರೆಯ ನೋಡಿ ನಾವೆಲ್ಲಾ ಹಿತ-ಮಿತವಾಗಿ ನೀರನ್ನು ಬಳಸಬೇಕಾಗಿದೆ. ಅನಾವಶ್ಯಕವಾಗಿ ನೀರನ್ನು ವ್ಯಯ ಮಾಡದೆ ಜಾಗೃತೆ ವಹಿಸಬೇಕಾಗಿದೆ.ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಕುಡಿಯುವ ನೀರಿಗೆ ಆಹಾಕಾರ ಆರಂಭವಾಗಿದೆ. ಬೇಕಾಬಿಟ್ಟಿಯಾಗಿ ಉಪಯೋಗಿಸದೆ ನೀರನ್ನು ಮಿತವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕು, ದೇವರ ಮನೆಯಿಂದ ಅಂಗಳದವರೆಗೆ ನೀರಿನ ನಿರ್ವಹಣೆ ಮಾಡುವ ತಾಯಂದಿರು ನೀರಿನ ಮಿತ ಬಳಕೆಯನ್ನು ರೂಢಿಸಿಕೊಳ್ಲಬೇಕು.ಒರತೆಗಳಂತಹ ನೀರಿನ ಸೆಲೆಗಳೇ ಮಾಯಾವಾಗಿರುವ ಪ್ರಸ್ತುತ ದಿನಗಳಲ್ಲಿ ನದಿಗಳ ಒಡಲು ಖಾಲಿಯಾಗಿರುವುದು ವಿಜ್ಞಾನಕ್ಕೊಂದು ಸವಾಲಾಗಿದೆ ಎನ್ನಬಹುದು.