ಜೀವನದಲ್ಲಿ ಶಿಸ್ತು ಆಳವಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಟಿ. ಭೂಬಾಲನ್

ಸಂಜೆವಾಣಿ ವಾರ್ತೆ,
ವಿಜಯಪುರ, ಫೆ.21: ವಿದ್ಯಾರ್ಥಿಗಳು ಜೀವನದಲ್ಲಿ ಮೊದಲು ಶಿಸ್ತು ಮತ್ತು ಸಂಸ್ಕಾರ ಅಳವಡಿಸಿಕೊಂಡು ಮುನ್ನಡೆಯಬೇಕು. ಇದಕ್ಕೆ ಸ್ಕೌಟ್ಸ್ ಮತು ್ತಗೈಡ್ಸ್ ಚಳವಳಿ ಉತ್ತಮ ವೇದಿಕೆಯಾಗಿದ್ದು ಇದರ ಸದುಪಯೋಗ ಎಲ್ಲರೂ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಹೇಳಿದರು.
ವಿಜಯಪುರ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬುರಣಾಪುರದ ವಾಸಂತಿಬಾಯಿ ಜಿಗಜಿನ್ನಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯ ಪುರಸ್ಕಾರ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯಅತಿಥಿ ಸ್ಥಾನ ವಹಿಸಿ ಮಾತನಾಡಿದ ಅವರು, ಒಂದು ದಿನ ನಾನೂ ನಿಮ್ಮ ಹಾಗೇ ಹೀಗೆ ಸ್ಕೌಟ್ ಶಿಬಿರದಲ್ಲಿ ಕುಳಿತು ಅಂದಿನ ಜಿಲ್ಲಾಧಿಕಾರಿಗಳು ನನಗೆ ನೀಡಿದ್ದ ಪ್ರಮಾಣ ಪತ್ರ ಸ್ವೀಕರಿಸಿದ್ದೆ. ಅಂದೇ ನಾನೂ ಜಿಲ್ಲಾಧಿಕಾರಿ ಆಗಬೇಕೆಂಬ ಕನಸು ಕಂಡಿದ್ದೆ. ಅದು ಇಂದು ನನಸಾಗಿದ್ದು ಈಗ ಸ್ಕೌಟ್ ಮತ್ತು ಗೈಡ್ ಎಂದೂ ಮರೆಯದಂತಾಗಿದೆ ಎಂದು ಹಿಂದಿನ ತಮ್ಮ ಸ್ಕೌಟ್ಸ್ ಮತ್ತು ಗೈಡ್ಸ್‍ಜೀವನ ನೆನಪಿಸಿಕೊಂಡು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾತರಬೇತಿ ಕೇಂದ್ರಕ್ಕೆ ಬೇಕಾಗಿರುವ ಮೂಲಭೂತ ಸೌಲಬ್ಯಗಳ ಬೇಡಿಕೆಗಳ ಮನವಿ ಪತ್ರವನ್ನು ನೀಡಿದ ಪದಾಧಿಕಾರಿಗಳು ಜಿಲ್ಲಾ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು. ನಂತರ ತರಬೇತಿ ಕೇಂದ್ರ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸಂಸ್ಥೆಯ ಬೇಡಿಕೆಗಳ ಕುರಿತು ಕ್ರಮವಹಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಪ್ರಧಾನ ಆಯುಕ್ತÀ ಸಿದ್ದಣ್ಣ ಸಕ್ರಿ ಮಾತನಾಡಿ, ಸಂಸ್ಥೆ ಮತ್ತು ತರಬೇತಿ ಕೇಂದ್ರದ ಬಗ್ಗೆ ವಿವರಿಸಿ ತರಬೇತಿ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತದ ಸಹಕಾರ ಕೋರಿದರು. ವೇದಿಕೆ ಮೇಲೆ ಖಜಾಂಚಿ ಸಹಜಾನಂದ ದಂಧರಗಿ, ಆಯುಕ್ತೆ ವಿದ್ಯಾವತಿ ಅಂಕಲಗಿ ಇದ್ದರು.
ಪ್ರಕಾಶ ಹದ್ಲಿ, ರಾಜಶೇಖರ ಖೇಡಗಿ, ಎಸ್.ಎಸ್. ಸಬರದ ಶ್ರೀನಿವಾಸ, ಉದಯ ಯಾಳವಾರ, ಪೂಜೆಪ್ಪ ಪೂಜಾರಿ, ಡಿ.ಎಲ್. ಪಿಂಜಾರ, ಸ್ಕೌಟರ್, ಗೈಡರ್ ಮತ್ತು ರೋವರ್‍ರೇಂಜರ್ ಲೀಡರ್ ಅವರು ಪಾಲ್ಗೊಂಡಿದ್ದರು.
ಜಗದೀಶ ಬೋಳಸೂರ ಸ್ವಾಗತಿಸಿದರು, ಪರಶುರಾಮ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಬೊಮ್ಮನಹಳ್ಳಿ ವಂದಿಸಿದರು. ಶಿವಶರಣಪ್ಪ ಶಿರೂರ ನಿರೂಪಿಸಿದರು.