ಭಾಲ್ಕಿ: ಜೂ.14:ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸು ಕಂಡು ಕೊಳ್ಳಬೇಕಾದರೆ ಚನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಎಂದು ಆರ್ಥಿಕ ಸಾಕ್ಷರತಾ ಕೇಂದ್ರದ ತಾಲೂಕು ಸಂಚಾಲಕ ಮಂಜುನಾಥ ಭಾಗವತ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಮಂಗಳವಾರ ಎಸ್‍ಬಿಐ ಆರ್ಥಿಕ ಸಾಕ್ಷರತಾ ಕೇಂದ್ರದ ವತಿಯಿಂದ ನಡೆದ ವಿದ್ಯಾರ್ಥಿಗಳ ಪ್ರೇರಣಾ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಭವಿಷದ ಜೀವನ ಉತ್ತಮ ಪಡಿಸಿಕೊಳ್ಳಬೇಕಾದರೆ ವಿದ್ಯಾರ್ಥಿ ಜೀವನದಲ್ಲಿ ಚನ್ನಾಗಿ ಓದಬೇಕು. ಓದಿದನ್ನು ಅರ್ಥಮಾಡಿಕೊಂಡು ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಬೇಕು. ಅಂದಾಗ ಮಾತ್ರ ಅಂತಹ ವಿದ್ಯಾರ್ಥಿಗಳಿಗೆ ಎಲ್ಲರೂ ಸಹಾಯಮಾಡುವರು. ಬ್ಯಾಂಕಿನವರೂ ಕೂಡ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೈಕ್ಷಣಸಾಲ ನೀಡುವರು. ಬಡ ವಿದ್ಯಾರ್ಥಿಗಳು ಇಂತಹ ಸಾಲವನ್ನು ಪಡೆದು ತಮ್ಮ ಜೀವನ ರೂಪಿಸಕೊಂಡು ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ವೈಯಕ್ತಿಕ ಜೀವನದಲ್ಲಿ ಇನ್ನೊಬ್ಬರಿಗೆ ಗೌರವಕೊಡುವ ಕಾರ್ಯಮಾಡಬೇಕು. ಮಿತವಾಗಿ ರುಚಿಯಾಗಿ ಮಾತನಾಡಬೇಕು. ತಂದೆ, ತಾಯಿ, ಗುರು, ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ವಿದ್ಯಾರ್ಥಿ ದೆಶೆಯಲ್ಲಿ ಉತ್ತಮ ಅಂಶಗಳನ್ನು ರೂಢಿಸಿಕೊಳ್ಳಬೇಕು. ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಿರಂತರವಾಗಿ ಅಭ್ಯಾಸ ಮಾಡಿ, ಉತ್ತಮ ಅಂಕ ಗಳಿಸಿ, ತಮ್ಮ ತಂದೆ, ತಾಯಿ, ಶಾಲೆಯ ಗುರುಗಳಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಶಿವಕುಮಾರ ವಾಡಿಕರ, ಕರಿಣರಕುಮಾರ ಭಾಟಸಾಂಗವೆ, ಶೋಭಾ ಮಾಸಿಮಾಡೆ, ಶಿವಶರಣಪ್ಪ ಸೊನಾಳೆ, ಪ್ರವೀಣ ಸಿಂಧೆ, ಓಂ.ಝೆಡ್.ಬಿರಾದಾರ ಉಪಸ್ಥಿತರಿದ್ದರು.
ಆರತಿ ಥಮಕೆ ಸ್ವಾಗತಿಸಿದರು. ಆನಂದ ಖಂಡಗೊಂಡ ನಿರೂಪಿಸಿದರು. ಪ್ರದೀಪ ಜೊಳಕಪಕೆ ವಂದಿಸಿದರು.