
ಸ್ಫೂರ್ತಿದಾಯಕ ಲೇಖನ :ಶ್ರೀಮತಿ ಲತಾಧರಣೇಶ್
“ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ,” ತಂದೆ ತಾಯಿಯ ಋಣ ತೀರಿಸಲು ಎಷ್ಟು ಜನ್ಮ ನಾವು ಅವರ ಸೇವೆ ಮಾಡಿದರು ಅದಕ್ಕೆ ಸರಿಸಾಟಿಯಾಗುವುದಿಲ್ಲ, ನಮ್ಮ ಜೀವನದಲ್ಲಿ ತಂದೆ-ತಾಯಿಗೆ ನೀಡುವ ಸ್ಥಾನಮಾನ ಗುರು ಹಿರಿಯರಿಗೂ ನಾವು ನೀಡಬೇಕಾಗಿದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ,
ನಮ್ಮ ಜೀವನದಲ್ಲಿ ತಂದೆ – ತಾಯಿ, ಗುರು-ಹಿರಿಯರ ಪೋಷಣೆ ಆರೈಕೆ ಮಹತ್ವವಾದದ್ದು
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ತಂದೆ-ತಾಯಿ,ಗುರು-ಹಿರಿಯರ ಪ್ರಭಾವ ಅತ್ಯಮೂಲ್ಯವಾಗಿದೆ,
ಸರ್ವಶ್ರೇಷ್ಠವಾದ ಹಿಂದೂ ಸಂಸ್ಕೃತಿಯಲ್ಲಿ ತಂದೆ ತಾಯಿ,ಗುರು ಹಿರಿಯರಿಗೆ ತುಂಬಾ ಮಹತ್ವವಾದ ಸ್ಥಾನ ನೀಡಲಾಗಿದೆ,
ಇವರ ಪೋಷಣೆ ಆರೈಕೆ ನಾವುಗಳು ಏಕೆ ಮಾಡಬೇಕು?
ಅವರ ಆಜ್ಞೆ ಪಾಲನೆಯನ್ನು ನಾವೇಕೆ ಪಾಲಿಸಬೇಕು?
ಎಂಬುದರ ಅನೇಕ ಉದಾಹರಣೆಗಳನ್ನು ಇತಿಹಾಸ ಪುರಾಣಗಳಲ್ಲಿ ಓದಿದ್ದೇವೆ,ಅವುಗಳಲ್ಲಿ ಕೆಲವು ಉದಾ, ಶ್ರೀರಾಮ,ಶ್ರವಣಕುಮಾರ, ಏಕಲವ್ಯ,ಛತ್ರಪತಿ ಶಿವಾಜಿ,ಇನ್ನೂ ಮಹಾನ್ ವ್ಯಕ್ತಿಗಳು ತಂದೆ ತಾಯಿ, ಗುರು ಹಿರಿಯರ ಮಾತು ಪಾಲಿಸಿದವರು,
ಮನುಷ್ಯ ಹುಟ್ಟಿದ ದಿನದಿಂದ ರೆಕ್ಕೆ ಬಲಿಯುವವರೆಗೆ ಪಾಲನೆ ಪೋಷಣೆ ಮಾಡಿ ತಪ್ಪು ಸರಿ ತಿದ್ದಿ ತೀಡಿ ಉತ್ತಮ ಗುಣಗಳನ್ನು ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡಲು ತಂದೆ ತಾಯಿ,ಗುರು ಹಿರಿಯರ ಪಾತ್ರ ದೊಡ್ಡದು, ಅಂತೆಯೇ ಗುರುಗಳು ವಿದ್ಯೆ ಬುದ್ಧಿ ವಿನಯ ಶಿಸ್ತು ಕಲಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಸರಿ ದಾರಿ ತೋರಿಸಿ ಉತ್ತಮ ಜೀವನ ರೂಪಿಸುವಲ್ಲಿ ಶಿಕ್ಷಕರ ಶ್ರಮ ದೊಡ್ಡದು ನಮ್ಮ ಜೀವನದಲ್ಲಿ ಸನ್ನಿವೇಶಗಳ ಅನ್ವಯ ಉತ್ತಮ ಮಾರ್ಗದರ್ಶಕರಾಗಿರುತ್ತಾರೆ, ಕತ್ತಲೆಯಿಂದ ಬೆಳಕಿಗೆ ಕೊಂಡೊಯ್ಯುವವರು ಬದುಕಿನಲ್ಲಿ ಗುರುಗಳ ಪಾತ್ರ ಬಹಳ ದೊಡ್ಡದು
ಇಂಥ ತಂದೆ ತಾಯಿ ಗುರು ಹಿರಿಯರ ಋಣ ತೀರಿಸಲಾದಿತೇ?
ಪ್ರತಿಯೊಬ್ಬರೂ ತಂದೆ ತಾಯಿಯ ಸೇವೆ ಮಾಡಬೇಕು ಗುರು ಹಿರಿಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು ಗುರುಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಸುಖಮಯವಾಗಿರುತ್ತದೆ.
ಮನುಕುಲ ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸಲು ಹಾಗೂ ಶ್ರೇಷ್ಠವಾದ ಬದುಕನ್ನು ತಮ್ಮದಾಗಿಸಲು ಮಹಾನ್ ವ್ಯಕ್ತಿಗಳ ಚರಿತ್ರೆ, ಇತಿಹಾಸ,ಪುರಾಣ-ಪ್ರವಚನ ಶ್ರವಣ ಮಾಡಬೇಕು.
ಇದು ನಮ್ಮ ಮಹಾನ್ ಹಿಂದೂ ಸಂಸ್ಕೃತಿಯ ಶಿಕ್ಷಣವಾಗಿದೆ, ಒಂದು ಸುಂದರ ವ್ಯಕ್ತಿತ್ವದ ಆಕಾರಕೊಟ್ಟ ತಂದೆ ತಾಯಿ, ಗುರುಹಿರಿಯರ ಮಹತ್ವವನ್ನು ಶಬ್ದಗಳಲ್ಲಿ ಬರೆಯಲಾಗುವುದಿಲ್ಲ,
ನಮಗೆ ನಾವೇ ಬದಲಾಗಲು ಸಾಧ್ಯವಿಲ್ಲ, ನಮಗೆ ನಾವೇ ಕಲಿಯುವುದು ಸಾಧ್ಯವಿಲ್ಲ, ತಾಯಿಯೇ ಮೊದಲ ಗುರು ತಾಯಿಯು ಮಮತೆಯಿಂದ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ
ನಾವು ಎಷ್ಟೇ ಎತ್ತರಕ್ಕೆ ಬೆಳೆದರು ನಮ್ಮನ್ನು ಪೋಷಿಸಿದವರನ್ನು ಸುಖವಾಗಿ ಸಾಕಿದಾಗಲೇ ತೃಪ್ತ ಭಾವ ದೊರೆಯುವುದು
ಗುರು ಹಿರಿಯರು ವೃದ್ಧ ತಂದೆ ತಾಯಿ ಪವಿತ್ರ ಗೋವು ಹಾಗೂ ಪ್ರಕೃತಿಯ ಮೇಲೆ ಯುವ ಪೀಳಿಗೆಯ ಗೌರವ ಭಾವನೆ ಉಳಿಸಿಕೊಳ್ಳಬೇಕು ಮನೆಯಲ್ಲಿ ತಂದೆ ತಾಯಿ ಹಿರಿಯರಿಗೆ ನಮಸ್ಕಾರ ಮಾಡುವುದು ಗೌರವ ಕೊಡುವುದು ನಮಗಿಂತ ದೊಡ್ಡವರಾದ ಎಲ್ಲ ವ್ಯಕ್ತಿಗಳಿಗೂ ತಲೆ ಬಾಗಿ ನಮಸ್ಕರಿಸುವ ಸಂಸ್ಕಾರವಿರಬೇಕು.
ಎಲ್ಲೆಲ್ಲಿ ದೊಡ್ಡತನ ವಿರುತ್ತದೆಯೋ ಅಲ್ಲಿ ವಯಸ್ಸು ಜ್ಞಾನ ಕಲೆ ಹೀಗೆ ಏನಾದರೂ ಇರಲಿ ನಮ್ಮ ಮಸ್ತಕವು ಬಾಗಲೇಬೇಕು.
ಪ್ರತಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಹಿಂದೆ ತಂದೆ ತಾಯಿ ಮನೆಯಲ್ಲಿ ಹಿರಿಯರು ವಿದ್ಯೆ ಕಲಿಸಿದ ಗುರುವಿನ ಪಾತ್ರ ತುಂಬಾ ಮಹತ್ವದ್ದಾಗಿರುತ್ತದೆ.
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ | ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ||
ಎನ್ನುವಂತೆ ಗುರು ನಮ್ಮ ಜೀವನದಲ್ಲಿ ಕೇವಲ ಶಾಲೆ, ಕಾಲೇಜು ಗಳಲ್ಲಿ ಮಾತ್ರವಲ್ಲ ಜೀವನದಲ್ಲಿ ಹಲವಾರು ಬಾರಿ ಎದುರಾಗುವ ಸಮಸ್ಯೆ, ಸಂಕಟಗಳಲ್ಲಿ ಒಂದೊಂದು ರೀತಿಯಲ್ಲಿ ಒಂದೊಂದ್ ರೂಪದಲ್ಲಿ ನಮಗೆ ಸಹಾಯಕ್ಕೆ ಬರುತ್ತಾರೆ ಅವರೆಲ್ಲರು ನಮ್ಮ ಗುರುಗಳು..
“ತಾಯಿ ಜೀವ ನೀಡಿದರೆ ಗುರುಗಳು ಜೀವನವನ್ನು ನೀಡುತ್ತಾರೆ “ ಎಂಬ ಮಾತು ಅಕ್ಷರಶಃ ಸತ್ಯ,ಆದ್ದರಿಂದ ನಮ್ಮ ವರ್ತನೆಯಿಂದ ತಂದೆ ತಾಯಿ ಗುರು ಹಿರಿಯರಿಗೆ ನೋವಾಗದಂತೆ ನಡೆದುಕೊಳ್ಳಬೇಕು ಇದಕ್ಕಾಗಿ ನಾವು ಅವರು ಹೇಳಿದ ಪ್ರತಿಯೊಂದು ಅಂಶವನ್ನು ಕೇಳಬೇಕು .
ನಾವು ಮಾತನಾಡುವಾಗ ಗೌರವದಿಂದ ಮಾತನಾಡಬೇಕು ಅಪ್ಪ ಅಮ್ಮನ ಜೊತೆಗಿನ ಮಕ್ಕಳ ಸಂಬಂಧ ಅಮೋಘವಾದದ್ದು, “ಅಲ್ಲೊಂದು ಬಿಡಿಸಲಾಗದ ಬಾಂಧವ್ಯದ ಬೆಸುಗೆಯಿದೆ, ಅಲ್ಲೊಂದು ಅಳಿಸಲಾಗದ ಆತ್ಮೀಯ ಅನುರಾಗವಿದೆ,
ಅಲ್ಲೊಂದು ಕರುಳು ಬಳ್ಳಿಯ ಬಿಗಿಯಾದ ಬಂಧನವಿದೆ”,
ಸನ್ನಡತೆಯನ್ನು ಕಲಿಸಿ ಸಂಸ್ಕಾರವನ್ನು ನೀಡಿ ವಿದ್ಯೆ ಬುದ್ಧಿಯ ಧಾರೆ ಎರೆದು ಮನುಷ್ಯನನ್ನಾಗಿ ಮಾಡಿದವರು ಕಣ್ಣಿಗೆ ಕಾಣುವ ದೇವರುಗಳು, ನಿಜವಾಗಿ ಎಷ್ಟು ನಮಿಸಿದರು ಸಾಲದು,
ಅಪ್ಪ ಅಮ್ಮ ನಮಗಾಗಿ ಆಸ್ತಿ ಅಂತಸ್ತು ಮಾಡಿಲ್ಲವೆಂದರು, ಮಕ್ಕಳೇ,ಅವರ ಆಸ್ತಿಯೆಂದು ನಮ್ಮನ್ನು ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುತ್ತಾರೆ.
ಖಂಡಿತ ತಂದೆ ತಾಯಿಯ ಜೊತೆ ವಾದ ಮಾಡಬೇಡಿ, ಅವರ ಮನಸ್ಸನ್ನು ಯಾವುದೇ ಕಾರಣಕ್ಕೂ ನೋಯಿಸಬೇಡಿ .
“ಅವರ ಒಂದು ನಿಟ್ಟುಸಿರು ನಮಗೆ ಶಾಪವಾಗಬಹುದು” “ಜೀವ ಜೀವನ” ಕೊಟ್ಟಿರುವವರಿಗೆ ಸರ್ವ ಅಧಿಕಾರವಿದೆ
ದಯವಿಟ್ಟು ಅಪ್ಪ ಅಮ್ಮನ ಬಗ್ಗೆ ಗೌರವ ಇಟ್ಟುಕೊಳ್ಳೋಣ ಹಲಸಿ ಹಾಳಾಗುವ ಹಲವಾರು ಸಂಬಂಧಗಳಿಗಿಂತ ಸದಾ ಹಸಿರಾಗಿರುವ ಅಪ್ಪ ಅಮ್ಮನ ಸಂಬಂಧ ಉಳಿಸಿಕೊಳ್ಳೋಣ ಆದರೆ ಇಂದು ಕೆಲವು ಕೃತಘ್ನ ಮಕ್ಕಳು ತಮ್ಮ ರೆಕ್ಕೆ ಬಲಿತ ಬಳಿಕ ತಮ್ಮ ತಂದೆ ತಾಯಿಯರ ಅಲಕ್ಷಿಸಿ ಸರಿಯಾಗಿ ನೋಡಿಕೊಳ್ಳುವುದಿಲ್ಲ .
ವೃದ್ದಾಶ್ರಮಕ್ಕೆ ಕಳಿಸುತ್ತಾರೆ ಇಂಥವರು ಮಾನವೀಯತೆಗೆ ಕಳಂಕವಾಗಿದ್ದಾರೆ.ಮುಂದೆ ಅವರಿಗೂ ಅಂತದೇ ಪರಸ್ಥಿತಿ ಬರುತ್ತದೆ ಎನ್ನುವುದು ಕೂಡ ಮರೆಯುತ್ತಾರೆ, ಇಂತಹವರು ಈ ದಿನಮಾನಗಳಲ್ಲಿ ಹೆಚ್ಚಾಗಿದ್ದಾರೆ. ಈ ಪಿಡುಗು ಆದಷ್ಟು ಬೇಗ ತೊಲಗಬೇಕಿದೆ.ಎಲ್ಲರಲ್ಲಿ ಪ್ರೀತಿ, ವಿಶ್ವಾಸ ಮೂಡಬೇಕಿದೆ.
ಬಾಕ್ಸ್
ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ತಂದೆಯ ಶ್ರಮದ ದುಡಿಮೆ ತಾಯಿ ಮಮತೆ ಕಾಳಜಿಯಲಿ ಮಕ್ಕಳನ್ನು ಎಷ್ಟು ಪ್ರೀತಿಯಿಂದ ತಂದೆ ತಾಯಿ ಸಾಕಿರುತ್ತಾರೆ ಇದನ್ನು ಪದಗಳಲ್ಲಿ ಬರೆಯಲಾದೀತೇ?
ಅಂತೆಯೇ ಅವರ ಬಾಳ ಸಂಜೆಯಲ್ಲಿ ಅವರಿಗೆ ಯಾವುದೇ ತೊಂದರೆ ಆಗದಂತೆ ಪ್ರೀತಿಯಿಂದ ನೋಡಿಕೊಳ್ಳಬೇಕು
ನಮ್ಮ ಈ ಅಸ್ತಿತ್ವಕ್ಕೆ ತಂದೆ ತಾಯಿಯೇ ಕಾರಣ
ತಂದೆ ತಾಯಿ ಹಿರಿಯರು ತಮ್ಮ ಮಕ್ಕಳು ಸುಖವಾಗಿರಬೇಕು ನೆಮ್ಮದಿಯ ಬಾಳು ನಡೆಸಬೇಕು ಎಂಬುದೇ ಅವರ ಚಿಂತೆ ಆಗಿರುತ್ತದೆ ಮತ್ತು ಕನಸಾಗಿರುತ್ತದೆ ಅವರು ತಮ್ಮ ಮಕ್ಕಳನ್ನು ಉಸಿರಿರುವವರೆಗೂ ಪ್ರೀತಿಸುತ್ತಾರೆ ಇದು ಸತ್ಯ ಮತ್ತು ನಿತ್ಯ
ಇಂಥ ತಂದೆ ತಾಯಿ ಗುರು ಹಿರಿಯರಿಗೆ ನಮ್ಮ ವರ್ತನೆಯಿಂದ ನೋವಾಗದಂತೆ ನೋಡಿಕೊಳ್ಳಬೇಕು
ಈ ಜಗತ್ತಿನಲ್ಲಿ ಹೆಚ್ಚಿನ ಎಲ್ಲಾ ಪ್ರೀತಿಗಳು ಸ್ವಾರ್ಥ ಭರಿತವಾಗಿರುತ್ತವೆ
ತಂದೆ ತಾಯಿಯ ಪ್ರೀತಿಗೆ ಸರಿಸಮವಾಗಲಾರವು
ತಂದೆ ತಾಯಿ ಗುರು ಹಿರಿಯರು ಜೀವನದ ಅತ್ಯುತ್ತಮ ಶಿಕ್ಷಕರು
ನಾವು ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಪಡೆದರು ಉತ್ತಮ ಸಂಸ್ಕಾರ, ನಯ ವಿನಯ ,ನಡೆನುಡಿ ಗುರು ಹಿರಿಯರಿಗೆ ಗೌರವ ,ಕಷ್ಟಕ್ಕೆ ನೆರವಾಗುವ ಗುಣ, ಸೋತಾಗ ಎದೆಗುಂದದೆ ಮುನ್ನುಗ್ಗುವ ಧೈರ್ಯ, ಇಂಥ ನೂರಾರು ತಿಳುವಳಿಕೆ ಜೀವನ ಎದುರಿಸುವ ಶಿಕ್ಷಣ ನೀಡಿದ ತಂದೆ ತಾಯಿ ಗುರು ಹಿರಿಯರ ಋಣವನ್ನು ಈ ಜನುಮದಲ್ಲಿ ತೀರಿಸಲು ಸಾಧ್ಯವಿಲ್ಲ.
“ತಂದೆ-ತಾಯಿ,ಗುರು-ಹಿರಿಯರ ಸೇವೆಯ ಮಾಡೊತನಕ ಜೀವನದಲ್ಲಿ ನಮಗೆ ದೊರೆಯದಂಡ ಮುಕ್ತಿ”
ಶ್ರೀಮತಿ ಲತಾಧರಣೇಶ್
ಲೇಖಕರು ಹಾಗೂ ಶಿಕ್ಷಕರು.
ಹುರುಳಿಹಳ್ಳಿ ಶಾಲೆ,ಹೊಸದುರ್ಗ ತಾ.