ಜೀವನಜ್ಯೋತಿ ಭೀಮಾ ಯೋಜನೆಯಡಿ ಅನುದಾನ

ಬಾಗಲಕೋಟೆ,ಜ.10- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅನೇಕ ಜನಪರ ಕಾಳಜಿಯ ಯೋಜನೆಗಳು ಜನರಲ್ಲಿ ಬದುಕಿನ ಬಗ್ಗೆ ಹೊಸ ಹೊಸ ಭರವಸೆಗಳನ್ನು ಹೊಂದಲು ಕಾರಣವಾಗುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಮರಣಹೊಂದಿದ ಬಾಗಲಕೋಟೆಯ ಬಡ ಕೂಲಿಕಾರ್ಮಿಕನಾದ ಷಣ್ಮುಖ ಎಂ ಅಂಬಿಗೇರ್ ಅವರ ಧರ್ಮಪತ್ನಿ ರೂಪಾ ಎಸ್. ಅಂಬಿಗೇರವರಿಗೆ ಪ್ರಧಾನಮಂತ್ರಿ ಜೀವನಜ್ಯೋತಿ ಭೀಮಾ ಯೋಜನೆಯ ಅಡಿಯಲ್ಲಿ 2ಲಕ್ಷ ರೂಪಾಯಿ ಲಭಿಸಿದೆ. ಬಹಳ ಬಡತನದಲ್ಲಿ ಬದುಕನ್ನು ಸಾಗಿಸುತ್ತಿದ್ದ ದಿ. ಷಣ್ಮುಖ ಎರಡು ವರ್ಷಗಳ ಹಿಂದೆ ಬ್ಯಾಂಕಿನಲ್ಲಿ ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಲ್ಲಿಸಿದ್ದನು.
ಫಲಾನುಭವಿಗಳಿಗೆ ಚೆಕ್ಕನ್ನು ವಿತರಿಸಿ ಮಾತನಾಡಿದ ನಗರದ ಜನಪ್ರಿಯ ಶಾಸಕರಾದ ಡಾ. ವೀರಣ್ಣ ಸಿ. ಚರಂತಿಮಠರವರು “ಸರಕಾರದ ಜನಪರ ಕಾಳಜಿಯ ಇಂತಹ ಯೋಜನೆಗಳು ಜನಸಾಮಾನ್ಯರಿಗೆ ಹೆಚ್ಚು ಹೆಚ್ಚಾಗಿ ತಲುಪುವಂತಾಗಬೇಕು. ಅಂದಾಗ ಮಾತ್ರ ಜನರಿಗೆ ಸರಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಜೀವನಜ್ಯೋತಿ ಭೀಮಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮಾಸಿಕವಾಗಿ 330ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಆಶ್ರಿತರು ಒಂದುವೇಳೆ ಆಕಸ್ಮಿಕವಾಗಿ ಮರಣ ಹೊಂದಿದರೆ ಅದರ ಸಂಪೂರ್ಣ ಹಣವನ್ನು ಅವರ ಅವಲಂಬಿತರು ಪಡೆದುಕೊಳ್ಳುತ್ತಾರೆ. ಈ ಸೌಲಭ್ಯವು ನಮ್ಮ ನಗರದ ಬಡ ಕುಟುಂಬವೊಂದಕ್ಕೆ ಸಿಕ್ಕಿರುವುದು ತುಂಬಾ ಹರ್ಷವನ್ನುಂಟುಮಾಡಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಹಿರಿಯ ಮ್ಯಾನೇಜರುಗಳಾದ ಮುಕುಂದ ಝಳಕಿ, ಗುರುಪ್ರಸಾದ, ಮಹಾಂತೇಶ ಬಾರಕೇರ, ಬಿಜೆಪಿ ಮುಖಂಡರಾದ ಶಂಕರ್ ಗಲಗ್, ಮಾನೇಶ್ ಅಂಬಿಗೇರ್, ಹಾಗೂ ದಿವಂಗತ ಷಣ್ಮುಖನವರ ಸಹೋದರ ಮುತ್ತು ಅಂಬಿಗೇರ್ ಉಪಸ್ಥಿತರಿದ್ದರು.