ಜೀವಜಲ ಸಂರಕ್ಷಣೆ ರಾಷ್ಟ್ರೀಯ ಆಂದೋಲನವಾಗಲಿ

ಕಲಬುರಗಿ:ಮಾ.22: ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣವಾದ ಅಮೂಲ್ಯವಾದ ಸಂಪತ್ತು ಜಲ. ಇದು ನಮ್ಮೆಲ್ಲರ ಬಲವಾಗಿದೆ. ವಿವಿಧ ಕಾರಣಗಳಿಂದ ಜಲ ಸಂಪತ್ತಿನ ಕೊರತೆಯಿಂದ ಪರಿಸರದ ಅಸಮತೋಲನವಾಗುತ್ತಿದೆ. ಜಲ ಸಂರಕ್ಷಣೆ ಸರ್ಕಾರ, ಕೆಲವು ವ್ಯಕ್ತಿ, ಸಂಸ್ಥೆಗಳ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಜೀವಜಲ ಸಂರಕ್ಷಣೆ ರಾಷ್ಟ್ರೀಯ ಆಂದೋಲನವಾಗಬೇಕಾಗಿದೆ ಎಂದು ನಿವೃತ್ತ ಪ್ರಾಚಾರ್ಯ, ಪರಿಸರ ಪ್ರೇಮಿ ಎಸ್.ಜಿ.ಅಜಗೊಂಡ ಹೇಳಿದರು.
ಕಾಳಗಿ ತಾಲೂಕಿನ ಹೇರೂರ್ ಸಮೀಪವಿರುವ ಬೆಣ್ಣೆತೊರೆ ಜಲಾಶಯಕ್ಕೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಬುಧವಾರ ಬಾಗಿನ್ ಅರ್ಪಿಸುವ ಮೂಲಕ ‘ವಿಶ್ವ ಜಲ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಜಲಸಂಪತ್ತು ಹಾಳಾಗದಂತೆ ತಡೆದು, ಅದನ್ನು ಮುಂದಿನ ಪೀಳಿಗೆಗೆ ಲಭ್ಯವಾಗುವಂತೆ ಮಾಡಬೇಕಾಗಿದೆ. ಭೂಮಂಡಲದಲ್ಲಿ ಒಟ್ಟು ಬಳಕೆಗೆ ಲಭ್ಯತೆಯ ನೀರಿನ ಪ್ರಮಾಣ ತುಂಬಾ ಕಡಿಮೆಯಿದ್ದು, ಅದರ ಸದ್ಭಳಕೆಯಾಗಬೇಕು. ಅರಣ್ಯನಾಶ, ಅತಿಯಾದ ಅಂತರ್ಜಲ ಬಳಕೆ, ಪರಿಸರ ಮಾಲಿನ್ಯ, ಅವೈಜ್ಞಾನಿಕ ನೀರಿನ ಬಳಕೆ, ಮಾನವನ ದುರಾಸೆಯಂತಹ ಮುಂತಾದ ಕಾರಣಗಳಿಂದ ಇದು ಬರಿದಾಗುತ್ತಿದ್ದು, ಇದು ಹೀಗಿಯೇ ಮುಂದುವರೆದರೆ ಕೆಲವು ವರ್ಷಗಳಲ್ಲಿ ನೀರಿಗಾಗಿ ಮೂರನೇ ವಿಶ್ವಯುದ್ಧ ಜರುಗಿದರೆ ಆಶ್ವರ್ಯಪಡಬೇಕಾಗಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ಶರಣಯ್ಯ ಶಿವಪೂಜಿಮಠ, ನಾಗಯ್ಯ ಮಠಪತಿ, ಸಿದ್ದಲಿಂಗಪ್ಪ ಕನ್ನಡಗಿ, ವಿಜಯಲಕ್ಷ್ಮೀ ಅಜಗೊಂಡ, ಸಿದ್ದು ಕಲ್ಲಾ, ಸಿದ್ದು ಧÀನಗರ ಸೇರಿದಂತೆ ಮತ್ತಿತರರಿದ್ದರು.