ಜೀತ ಪದ್ದತಿ ಅಮಾನವೀಯ ಮತ್ತು ಶಿಕ್ಷಾರ್ಹ ಅಪರಾಧ

ಕಲಬುರಗಿ:ಫೆ.09: ಬ್ರಿಟಿಷರ ಆಡಳಿತ, ಬಡತನ, ನಿರುದ್ಯೋಗ, ಅನಕ್ಷರತೆಯಂತಹ ಕಾರಣಗಳಿಂದ ದಾರಿದ್ರ್ಯ ಉಂಟಾಗುವ ಮೂಲಕ ತುಂಬಾ ಕಷ್ಟವನ್ನು ಎದುರಿಸುವ ಸಂದರ್ಭ ಉಂಟಾಗಿ ಜೀತದಾಳಾಗಿ ದುಡಿಯುವದು ಆರಂಭವಾಯಿತು. ಬಡವರನ್ನು ಶೋಷಣೆ ಮಾಡುವ ಜೀತ ಪದ್ದತಿಯು ಅಮಾನವೀಯ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಅದರ ಸಂಪೂರ್ಣ ನಿರ್ಮೂಲನಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ, ಸಾಮಾಜಿಕ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಜೆ.ಆರ್ ನಗರದ ‘ಶ್ರೇಯಸ್ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ಜೀತ ಪದ್ದತಿಯ ನಿರ್ಮೂಲನೆ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜೀತ ಪದ್ದತಿಯ ನಿರ್ಮೂಲನೆಗಾಗಿ 1976ರಲ್ಲಿ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದೆ. ಜೀತ ಪದ್ಧತಿಯು ವ್ಯಕ್ತಿಯನ್ನು ಹಿಂಸಿಸುವ ಕೆಟ್ಟ ಪದ್ಧತಿಯಾಗಿದೆ. ಬಡವರು, ಅಸಹಾಯಕರು ಶ್ರೀಮಂತರ ತುತ್ತಾಗುತ್ತಿರುವುದು ನೋವಿನ ಸಂಗತಿ. ಜೀತದಾಳುಗಳಿಗೆ ಸಾಲಮುಕ್ತ ಮಾಡಿ, ಅವರಿಗೆ ಸೌಲಭ್ಯಗಳನ್ನು ನೀಡಲು ಕಾಯ್ದೆ-ಕಾನೂನುಗಳಲ್ಲಿ ಅವಕಾಶವಿದೆ. ಜೀತ ವಿಮುಕ್ತಿ ಹೊಂದಿದವರಿಗೆ ದೊರೆಯುವ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಅಗತ್ಯ. ಶ್ರಮಿಕ ವರ್ಗದ ಬಗ್ಗೆ ಕೀಳರಿಮೆ ಬೇಡ. ದುಡಿಯುವ ವರ್ಗ ಕನಿಷ್ಟ ಮತ್ತು ದುಡಿಸಿಕೊಳ್ಳುವ ವರ್ಗ ಶ್ರೇಷ್ಟವೆಂಬ ಮನೋಭಾವನೆ ಬೇಡ ಎಂದರು.
ಕಾರ್ಯಕ್ರಮದಲ್ಲಿ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಸೈಯದ್ ಹಮೀದ್, ಉಮೇಶ ಹತ್ತಿ, ದೇವು ಸೋಹೆಲ್ ಶೇಖ್ ಸೇರಿದಂತೆ ಇನ್ನಿತರರಿದ್ದರು.