ಜಿ-20: ಸಾಂಸ್ಕೃತಿಕ ಕಾರ್ಯಕಾರಿ ಸಭೆ ಅಂತ್ಯ : ಶೆರ್ಪಾ ಸಭೆ ಆರಂಭ.


ಸಂಜೆವಾಣಿ ವಾರ್ತೆ
ಹೊಸಪೇಟೆ ಜು13: ವಿಶ್ವವಿಖ್ಯಾತ, ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ 3 ದಿನಗಳ ಕಾಲ ನಡೆದ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಯು ಬುಧವಾರ ತೆರೆ ಕಂಡಿದ್ದು ಇಂದಿನಿಂದ ಶೆರ್ಪಾ ಸಭೆಗಳು ಆರಂಭಗೊಂಡಿವೆ. 
ಜು.10ರ ಸೋಮವಾರದಿಂದ ಆರಂಭಗೊಂಡಿದ್ದ ಸಭೆಯಲ್ಲಿ ಭಾರತವು ಸೇರಿದಂತೆ 19 ಸದಸ್ಯ ರಾಷ್ಟ್ರಗಳು, 9 ಅತಿಥಿ ರಾಷ್ಟ್ರಗಳು ಹಾಗೂ 4 ಅಂತರಾಷ್ಟ್ರೀಯ ಸಂಸ್ಥೆಯ ಅತ್ಯುನ್ನತ ಪ್ರತಿನಿಧಿಗಳ ನೇತೃತ್ವದಲ್ಲಿ ಪ್ರತಿ ದಿನ ಎರಡು ಹಂತಗಳಲ್ಲಿ ಚರ್ಚೆಗಳನ್ನು ನಡೆಸಲಾಯಿತು. ಬುಧವಾರ ನಡೆದ ಚರ್ಚೆಯಲ್ಲಿ 3ನೇ ಸಾಂಸ್ಕೃತಿಕ ಕಾರ್ಯಕಾರಿ ಸಭೆಯ ಅಂತಿಮ ಅಧಿವೇಶನವು ಆ.26ರಂದು ವಾರಣಾಸಿಯಲ್ಲಿ ನಡೆಯಲಿದ್ದು, ಸಮರೋಪ ಸಭೆಯ ನವೀಕರಣ ಹಾಗೂ ಕೈಗೊಳ್ಳಬೇಕಾದ ಅಭಿವೃದ್ಧಿ ಕ್ರಮಗಳ ಬಗ್ಗೆ ಚರ್ಚೆ ಕೈಗೊಳ್ಳುವುದರ ಮೂಲಕ ಮುಕ್ತಾಯಗೊಂಡವು.
ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಯೋಗ, ಜಲವಿಹಾರ:
ಜು.10ರಿಂದ ಆರಂಭಗೊಂಡ 3ನೇ ಸಾಂಸ್ಕೃತಿಕ ಕಾರ್ಯಕಾರಿ ಸಭೆಯನ್ನು ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ಉದ್ಘಾಟಿಸಿ ಸಾಂಸ್ಕೃತಿಕ ಸಭೆಯ ಮೂಲಕ ಭಾರತವು ಹೊಂದಿದ್ದ 4 ಪ್ರಮುಖ ಉದ್ದೇಶಗಳ ಕುರಿತು ಮಾತನಾಡಿದರು. ಸಭೆಯ ನಂತರ ಸಂಜೆ ವೇಳೆಯಲ್ಲಿ ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ನಡೆದ ಲಂಬಾಣಿ ಕಸೂತಿಗಳ ಪ್ರದರ್ಶನ ಹಾಗೂ ಸಂಡೂರಿನ ಕುಶಲ ಕಲಾ ಕೇಂದ್ರಕ್ಕೆ ಗಿನ್ನೆಸ್ ದಾಖಲೆಯ ಅಧಿಕೃತ ಘೋಷಣೆಯ ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾದರು. ನಂತರ ಹಂಪಿಯ ಚಕ್ರತೀರ್ಥದ ಸಮೀಪದಲ್ಲಿರುವ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ(ಕೊರಾಕಲ್ ರೈಡ್)ಯಲ್ಲಿ ಪಾಲ್ಗೊಂಡು ಕಲ್ಲುಬಂಡೆಗಳ, ಜಲವಿಹಾರ ಹಾಗೂ ಪ್ರಾಕೃತಿಕ ಸೌಂದರ್ಯವನ್ನು ಸವಿದರು.
ನಂತರ ಇಳಿ ಸಂಜೆವೇಳೆಯಲ್ಲಿ ಹಂಪಿಯ ಪ್ರಸಿದ್ದ ವಿಜಯವಿಠ್ಠಲ ದೇವಸ್ಥಾನದ ಆವರಣದಲ್ಲಿ ವಿದ್ಯುತ್ ಬೆಳಕಿನಲ್ಲಿ ಕಂಗೊಳಿಸುತ್ತಿದ್ದ ಸ್ಮಾರಕಗಳ ನಡುವೆ ವಿವಿಧ ಕಲಾವಿದರಿಂದ ನಡೆದ ಸಾಂಸ್ಕೃತಿಕ ಕಲಾಪ್ರದರ್ಶನವನ್ನು ಕಣ್ತುಂಬಿಕೊಂಡರು. ಖ್ಯಾತ ಸಂಗೀತಗಾರ ವಿಕ್ಕು ವಿನಾಯಕರಾವ್ ಅವರ ತಂಡದಿಂದ ನಡೆದ ತಾಳವಾದ್ಯ, ಘಟಂ ವಾದನ, ಫ್ಯೂಷನ್ ಸಂಗೀತ ಆನಂದಿಸುವ ಜೊತೆಗೆ ಜೊತೆಗೆ ಭರತನಾಟ್ಯ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಮಂಗಳವಾರ ಜಿ-20 ಅತ್ಯುನ್ನತ ಪ್ರತಿನಿಧಿಗಳಿಗಾಗಿ ಸ್ಮಾರಕ ದರ್ಶನ ಆಯೋಜಿಸಲಾಗಿತ್ತು. ಇಳಿಸಂಜೆ ವೇಳೆಯಲ್ಲಿ ಮೊದಲಿಗೆ ರಾಣಿ ಸ್ನಾನಗೃಹಕ್ಕೆ ತೆರಳಿದರು. ರಾಣಿ ಸ್ನಾನ ಗೃಹದ ಆವರಣದಲ್ಲಿ ಜಿ-20 ಪ್ರತಿನಿಧಿಗಳು ತಾವು ಭೇಟಿ ನೀಡಿದ ಸವಿನೆನಪಿಗಾಗಿ ಗಿಡಗಳನ್ನು ನೆಟ್ಟು ನೀರೆರೆದರು. ನಂತರ ಮಹಾನವಮಿ ದಿಬ್ಬ, ಪುಷ್ಕರಣಿ, ಹಜಾರರಾಮ ದೇವಸ್ಥಾನ, ಕಮಲ ಮಹಲ್ ಹಾಗೂ ಗಜಶಾಲೆಗೆ ಭೇಟಿ ನೀಡಿ ಅಲ್ಲಿನ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಪ್ರವಾಸೋದ್ಯಮ ಇಲಾಖೆಯಿಂದ ಒದಗಿಸಿದ್ದ ಪ್ರವಾಸಿ ಮಾರ್ಗದರ್ಶಿಗಳು ಜಿ-20 ಅತ್ಯುನ್ನತ ಪ್ರತಿನಿಧಿಗಳಿಗೆ ಹಂಪಿಯ ಭವ್ಯ ಇತಿಹಾಸ ಹಾಗೂ ಪರಂಪರೆಯ ಕುರಿತು ಮಾಹಿತಿ ನೀಡಿದರು. ನಂತರ ಇಳಿಸಂಜೆ ವೇಳೆಯಲ್ಲಿ ಎದುರು ಬಸವಣ್ಣ ವೇದಿಕೆಯ ಬಳಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ರಾಧಾ ಮತ್ತು ರಾಜಾರೆಡ್ಡಿ ಅವರ ತಂಡ, ಕೌಸಲ್ಯ ರೆಡ್ಡಿ ಅವರ ತಂಡದಿಂದ ಭರತನಾಟ್ಯಂ, ಮೋಹಿನಿಯಾಟ್ಟಂ, ಕೂಚಿಪುಡಿ ಮತ್ತು ಒಡಿಸ್ಸಿ ನೃತ್ಯಗಳನ್ನು ಪ್ರದರ್ಶಿಸಲಾಯಿತು.
ಬುಧವಾರ ಹಂಪಿಯ ಹಜಾರರಾಮ ದೇವಸ್ಥಾನದಲ್ಲಿ ಜಿ-20 ಅತ್ಯುನ್ನತ ಪ್ರತಿನಿಧಿಗಳು ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರತಿನಿಧೀಗಳಿಗೆ ಸೂರ್ಯೋದಯದ ಸಮಯದಲ್ಲಿ ವಿವಿಧ ಆಸನಗಳು ಹಾಗೂ ಅವುಗಳ ಪ್ರಮುಖ್ಯತೆ ಕುರಿತು ಮಾಹಿತಿ ನೀಡಿಲಾಯಿತು. ಬುಧವಾರ ಮಧ್ಯಾಹ್ನದ ವೇಳೆಯಲ್ಲಿ ಜಿ-20 ಮೂರನೇ ಸಾಂಸ್ಕøತಿಕ ಕಾರ್ಯಕಾರಿ ತಂಡ ಮರಳಿತು.
ಗುರುವಾರದಿಂದ ಶೆರ್ಪಾ ಸಭೆ ನೆರವೇರಲಿದ್ದು, ಜಿ-20ಯ ವಿವಿಧ ರಾಷ್ಟ್ರಗಳ ಶೆರ್ಪಾ ಪ್ರತಿನಿಧಿಗಳು ಹಂಪಿಗೆ ಆಗಮಿಸಿದ್ದು ಇಂದಿನಿಂದ ಸಭೆಗಳು ಜು16 ರವರೆಗೂ ನಡೆಯಲಿವೆ.

One attachment • Scanned by Gmail