
ಬೀದರ್: ಮಾ.19: ದೇಶ ಜಿ 20 ಶೃಂಗ ಸಭೆಯ ಅಧ್ಯಕ್ಷತೆ ವಹಿಸಲಿರುವುದು ಭಾರತೀಯರಿಗೆ ಸಂತಸ ಉಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹೇಳಿದರು.
ನೆಹರು ಯುವ ಕೇಂದ್ರ, ಜಗದ್ಗುರು ಪಂಚಾಚಾರ್ಯ ಯುವಕ ಸಂಘ, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಹಾಗೂ ಗುರುನಾನಕ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಘಟಕದ ಸಹಯೋಗದಲ್ಲಿ ನಗರದ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಇರುವ ಗುರುನಾನಕ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ನೆರೆ ಹೊರೆ ಯುವ ಸಂಸತ್ತು ಹಾಗೂ ಭಾರತದ ಜಿ 20 ಶೃಂಗ ಸಭೆಯ ಅಧ್ಯಕ್ಷತೆಯ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಕ್ಷ ಭೇದ ಮರೆತು ಎಲ್ಲರೂ ಜಿ 20 ಶೃಂಗ ಸಭೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಉದ್ಘಾಟನೆ ನೆರವೇರಿಸಿದ ಶಾಸಕ ರಹೀಂಖಾನ್ ಮಾತನಾಡಿ, ಯುವಕರು ದೇಶದ ಭವಿಷ್ಯವಾಗಿದ್ದು, ಸ್ವಾವಲಂಬಿಗಳಾಗಬೇಕು. ದೇಶವನ್ನು ಮುನ್ನಡೆಸಬೇಕು ಎಂದು ಹೇಳಿದರು.
ಡಾ. ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಆಧುನಿಕ ವಿಜ್ಞಾನ, ಸಂಶೋಧನೆಗಳೆಲ್ಲವೂ ಭಾರತದ ವೇದ, ಉಪ ನಿಷತ್ತುಗಳಲ್ಲಿ ಇವೆ. ಆಯುರ್ವೇದ, ವಿಜ್ಞಾನ, ಗಣಿತ ಸೇರಿದಂತೆ ವಿಶ್ವದ ಎಲ್ಲ ಕ್ಷೇತ್ರಗಳಿಗೂ ಭಾರತದ ಕೊಡುಗೆ ಅಪಾರವಾಗಿದೆ ಎಂದರು.
ಕೇಂದ್ರ ಸರ್ಕಾರವು ದೇಶದ ಸಮಗ್ರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಇಂದು ದೇಶಕ್ಕೆ ಯುವ ನಾಯಕತ್ವದ ಹೆಚ್ಚು ಅವಶ್ಯಕತೆ ಇದೆ. ಆಡಳಿತದ ಬಗ್ಗೆ ಯುವಕರಿಗೆ ಪ್ರೇರಣೆ ನೀಡಲು ಯುವ ಸಂಸತ್ತು ಆಯೋಜಿಸಲಾಗಿದೆ ಎಂದು ಹೇಳಿದರು.
ದೇಶ ಜಿ 20 ಶೃಂಗ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವುದರೊಂದಿಗೆ ಸ್ವಾಮಿ ವಿವೇಕಾನಂದರ ಭಾರತ ವಿಶ್ವಗುರು ಆಗುವ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.
ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಲಬೀರಸಿಂಗ್, ಮಹಾತ್ಮ ಬೊಮ್ಮಗೊಂಡೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಕಾಲೇಜು ಪ್ರಾಚಾರ್ಯೆ ಡಾ. ಶಾಮಲಾ ವಿ. ದತ್ತಾ, ಸಹಾಯಕ ಪ್ರಾಧ್ಯಾಪಕರಾದ ಗೌರಮ್ಮ ಮಠಪತಿ, ನಾಗೇಶ ಯರನಾಳೆ, ಸೌಮ್ಯಶ್ರೀ ಗುಮ್ಮಾ, ಸೌಮ್ಯ ಪಾಟೀಲ, ಪೂಜಾ ಗಡ್ಡೆ, ರೇಣುಕಾ ಕೊಂಗುಟ್ಟೆ, ಜದೀಶ್ ಅಕ್ಕೆ, ಶೈಲೇಶ ಎಂ, ಗಿರಿಧರ ಬಿರಾದಾರ, ರೇಣುಕಾ ಹಿಪ್ಪಳಗಾಂವಕರ್, ರಾಮರಾವ್ ಜಾಧವ್ ಇದ್ದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ ಸ್ವಾಗತಿಸಿದರು. ವಿನಯ ಜಿ.ಎಂ. ನಿರೂಪಿಸಿದರು. ಗುರುನಾನಕ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಜಿ.ಎನ್. ಮಠಪತಿ ವಂದಿಸಿದರು.
ಜಿಲ್ಲೆಯ ವಿವಿಧ ಯುವಕ ಸಂಘಗಳ ಪದಾಧಿಕಾರಿಗಳು ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ಅಣಕು ಸಂಸತ್ತಿನಲ್ಲಿ ದೇಶದ ವಿವಿಧ ಅಭಿವೃದ್ಧಿ ವಿಷಯ, ಜಿಎಸ್‍ಟಿ, ಜಿ 20 ಹಾಗೂ ವೈ 20 ಶೃಂಗ ಸಭೆ ಕುರಿತು ಆಡಳಿತ ಹಾಗೂ ವಿಪಕ್ಷ ಸಾಲಿನಲ್ಲಿ ಕುಳಿತು ಸ್ವಾರಸ್ಯಕರ ಚರ್ಚೆ ನಡೆಸಿದರು.