ಜಿ-20 ಶೃಂಗಸಭೆ-ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಗಾರ


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ15:ಪ್ರತಿಯೊಬ್ಬ ವಿದ್ಯಾರ್ಥಿಗಳ ಏಳ್ಗೆಯಲ್ಲಿ ಶಿಕ್ಷಕರು ಹೊಣೆಗಾರಿಕೆ ಪ್ರದರ್ಶನ ಮಾಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್ ಜಿ. ಹೇಳಿದರು.
ವಿಶ್ವವಿಖ್ಯಾತ ಹಂಪಿಯಲ್ಲಿ ಜು. 13 ಮತ್ತು 14 ರಂದು ನಡೆಯಲಿರುವ ಜಿ-20 ಶೃಂಗಸಭೆಯ ಭಾಗವಾಗಿ ನಗರದ ಕೇಂದ್ರಿಯ ವಿದ್ಯಾಲಯದ ವತಿಯಿಂದ ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿ ರ್ಯಾಂಕ್ ಪಡೆದ ವಿದ್ಯಾರ್ಥಿಯನ್ನು ನೆಚ್ಚಿನ ವಿದ್ಯಾರ್ಥಿಯೆಂದು ಭಾವಿಸುವ ಶಿಕ್ಷಕರು ಇತರ ವಿದ್ಯಾರ್ಥಿಗಳ ಏಳಿಗೆಯಲ್ಲೂ ಸಹ ತಮ್ಮ ಹೊಣೆಗಾರಿಕೆ ಪ್ರದರ್ಶಿಸಬೇಕು. ಕಲಿಕೆಯಲ್ಲಿ, ಮೂಲ ಶಿಕ್ಷಣದಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಮುನ್ನೆಲೆಗೆ ತರುವ ಹೊಣೆಗಾರಿಕೆಯನ್ನು ಶಿಕ್ಷಕರು ವಹಿಸಿಕೊಳ್ಳಬೇಕು. ಅಂತಹ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ಜೊತೆಗೆ ಕಲಿಕೆಯಲ್ಲಿ ಮುಂದುವರಿಯಲು ಆಸಕ್ತಿದಾಯಕವಾದ ವಿಷಯಗಳನ್ನು ಅವರಿಗೆ ಪ್ರಸ್ತುತ ಪಡಿಸಬೇಕು ಎಂದು ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ 14 ಜಿ-20 ಸಭೆ:
ಭಾರತ ದೇಶದ ಪ್ರಗತಿ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಜಿ-20 ಪೂರಕವಾಗಲಿದೆ. ಈ ಬಾರಿ ರಾಜ್ಯದಲ್ಲಿ 14 ಜಿ-20 ಸಭೆಗಳು ನಡೆಯಲಿದೆ. ಬೆಂಗಳೂರಿನಲ್ಲಿ 11, ಮೈಸೂರಿನಲ್ಲಿ ಒಂದು ಸಭೆ ಸೇರಿದಂತೆ ವಿಶ್ವವಿಖ್ಯಾತ ಹಂಪಿಯಲ್ಲಿ 2 ಸಭೆಗಳು ನಡೆಯಲಿವೆ ಎಂದರು.
ಹಂಪಿಯಲ್ಲಿ ನಡೆಯುವ ಸಭೆ ಮಹತ್ವದ್ದಾಗಿದ್ದು, 20 ರಾಷ್ಟ್ರಗಳ 200ಕ್ಕೂ ಅತ್ಯುನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹಂಪಿ ಪ್ರದೇಶದಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಅತ್ಯುತ್ತಮ ಆತಿಥ್ಯ ಹಾಗೂ ಸಭೆಗೆ ಬೇಕಾದ ಅಗತ್ಯ ಸೌಕರ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಟಿ.ಕೆ.ರೂಪ, ಮಲ್ಲಿಕೇಶಿ ಕೆ.ಬಿ. ಹಾಗೂ ಮಣಿಕಂಠ ಅವರು ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿವಿಧ ಶಾಲೆಗಳ 115 ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲ ಕಮಲೇಶ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.