ಜಿ-20 ರಾಷ್ಟ್ರಗಳ ಗುಂಪಿಗೆ ಆಫ್ರಿಕನ್ ಯೂನಿಯನ್ ಸೇರ್ಪಡೆಗೆ ಸದಸ್ಯ ರಾಷ್ಟ್ರಗಳ ಬೆಂಬಲ


ಸಂಜೆವಾಣಿ ವಾರ್ತೆ
ಹೊಸಪೇಟೆ ಜು16: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಿ-20 ಸದಸ್ಯ ರಾಷ್ಟ್ರಗಳ ಸಾಲಿಗೆ ಆಫ್ರಿಕನ್ ಯೂನಿಯನ್ ಸಹ ಸೇರ್ಪಡೆಗೊಳಿಸಲು ಮಂಡಿಸಿದ ಪ್ರಸ್ತಾವನೆಗೆ 3ನೇ ಶೆರ್ಪಾ ಸಭೆಯಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ ಎಂದು ಜಿ-20 ಭಾರತೀಯ ಶೆರ್ಪಾದ ಅಮಿತಾಬ್ ಕಾಂತ್ ತಿಳಿಸಿದರು.
ಹಂಪಿ ಎವಾಲ್ವೋ ಬ್ಯಾಕ್ ರೆಸಾರ್ಟ್‍ನಲ್ಲಿ ಶನಿವಾರ ಮೂರನೇ ದಿನದ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಯೂರೋಪ್ ಯೂನಿಯನ್ ರಾಷ್ಟ್ರಗಳು ಜಿ-20 ಸದಸ್ಯ ರಾಷ್ಟ್ರಗಳಾಗಿವೆ. ಆಫ್ರಿಕನ್ ರಾಷ್ಟ್ರಗಳ ಸೇರ್ಪಡೆಯಾಗುವುದರಿಂದ ಜಿ-20ಗೆ ಪ್ರಪಂಚದಲ್ಲಿ ಹೆಚ್ಚಿನ ರಾಷ್ಟ್ರಗಳು ಸೇರ್ಪಡೆಯಾದಂತಾಗಿ ಇದು ಪ್ರಪಂಚದ ದೊಡ್ಡ ಆರ್ಥಿಕ ವೇದಿಕೆಯಾಗಲಿದೆ ಎಂದರು.
ಸೆಪ್ಟೆಂಬರ್ 9 ಹಾಗೂ 10 ರಂದು ದೆಹಲಿಯಲ್ಲಿ ನಡೆಯಲಿರುವ ಜಿ-20 ರಾಷ್ಟ್ರಗಳ ನಾಯಕರ ಅಂತಿಮ ಸಭೆಯಲ್ಲಿ ಕೈಗೊಳ್ಳಲಿರುವ ಒಪ್ಪಂದದ ಪೂರ್ಣ ಪ್ರಮಾಣದ ಕರಡು ಪ್ರತಿ ರೂಪಿಸುವಲ್ಲಿ ಹಂಪಿಯಲ್ಲಿ ನಡೆಯುತ್ತಿರುವ ಶೆರ್ಪಾ ಸಭೆ ಯಶಸ್ವಿಯಾಗಿದೆ. ಈ ಸಭೆಯಲ್ಲಿ ಭಾರತ ಹಲವಾರು ಪ್ರಸ್ತಾವನೆಗಳನ್ನು ಜಿ-20 ಸದಸ್ಯ ರಾಷ್ಟ್ರಗಳ ಮುಂದಿರಿಸಿದೆ. ಈ ಪ್ರಸ್ತಾವನೆಗಳು ಜಾಗತಿಕವಾಗಿ ಕಾರ್ಯಸೂಚಿಗಳನ್ನು ರೂಪಿಸುವಲ್ಲಿ ಹಾಗೂ ಪ್ರಸ್ತುತ ಜಾಗತಿಕ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಹತ್ವಪೂರ್ಣವಾಗಿದೆ ಎಂದರು.
ಜಿ-20 ರಾಷ್ಟ್ರಗಳ ಸದಸ್ಯರು ಭಾರತ ರೂಪಿಸಿದ ಕರಡು ಪ್ರತಿಗೆ ರಚನಾತ್ಮಕ ಸಲಹೆ, ಸೂಚನೆ ನೀಡುವುದರೊಂದಿಗೆ ತಾತ್ವಿಕ ಒಪ್ಪಿಗೆ ಸೂಚಿಸಿವೆ. ಭಾರತದ ಕ್ರಿಯಾತ್ಮಕ ಯೋಜನೆಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ. ಹಿಂದೆ ನಡೆದ ಜಿ-20 ರಾಷ್ಟ್ರಗಳಲ್ಲಿ ಮೂಡಿಬಂದ ಒಪ್ಪಂದಗಳ ಘೋಷಣೆಗಳಿಗಿಂತಲೂ ಭಾರತದ ಘೋಷಣೆ ಮಹತ್ವಾಕಾಂಕ್ಷಿಯಾಗಿದೆ. ಈ ಘೋಷಣೆಗಳು ಅಭಿವೃದ್ಧಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಆರ್ಥಿಕ ಬದಲಾವಣೆಗೆ ಸಹಕಾರಿಯಾಗಲಿದೆ. ಇದು ಜಿ-20 ಶೃಂಗ ಸಭೆಯ ಮುಖ್ಯ ಆಶಯವೂ ಆಗಿದೆ ಎಂದರು.
ಮುಂದುವರಿಯುತ್ತಿರುವ ರಾಷ್ಟ್ರಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್ಥಿಕತೆಯ ಅಂತರ ಕಡಿಮೆ ಮಾಡುವುದು, ಅಂತರಾಷ್ಟ್ರೀಯ ಸಾಲ ಮರುಪಾವತಿ, ವಿವಿಧ ರಾಷ್ಟ್ರಗಳ ನಡುವಿನ ಹಣಕಾಸು ಸಂಸ್ಥೆಗಳ ಸ್ಥಾಪನೆ, ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ.
ಮಾನವ ಕಲ್ಯಾಣ, ಅಂತರಾಷ್ಟ್ರೀಯ ವ್ಯವಹಾರ, ಸಾರ್ವಜನಿಕ ಮೂಲಭೂತ ಸೌಕರ್ಯದ ಡಿಜಟಲೀಕರಣದ ಜೊತೆಗೆ ಆರ್ಥಿಕ ವ್ಯವಹಾರಗಳ ಡಿಜಟಲೀಕರಣಗೊಳಿಸಿ ಆರ್ಥಿಕತೆಯ ಲಾಭ ಎಲ್ಲಾ ಜನರಿಗೂ ತಲುಪುವಂತೆ ಮಾಡಲು ಶ್ರಮಿಸಲಾಗುತ್ತಿದೆ. ಇದರೊಂದಿಗೆ ಅಂತರಾಷ್ಟ್ರೀಯ ಶಾಂತಿ, ಭಯೋತ್ಪಾದನೆ ನಿಗ್ರಹ, ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ತಡೆ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಅಂತರಾಷ್ಟ್ರೀಯ ಕಾನೂನು, ಭ್ರಷ್ಠಾಚಾರ ಹೋಗಲಾಡಿಸಲು ಕ್ರಮಗಳ ಕುರಿತು ಯೋಜನೆ ರೂಪಿಸಲಾಗಿದೆ.
ಹಣಕಾಸು ವಿಷಯಗಳಿಗೆ ಸಂಬಂಧಿಸಿದಂತೆ ಕ್ರಿಪ್ರೊಟೀ ಕರೆನ್ಸಿ ಕುರಿತು ರೂಪು ರೇಶೆ, ಟ್ಯಾಕ್ಸ್ ಸೇರಿದಂತೆ ಹಲವಾರು ವಿಷಯಗಳನ್ನು ಶೆರ್ಪಾ ಸಭೆಯಲ್ಲಿ ಸರಳೀಕರಣಗೊಳಿಸಲು ಚರ್ಚಿಸಲಾಗಿದೆ. ಸುಸ್ಥಿರ ಅಭಿವೃದ್ಧಿಗಾಗಿ ಹಸಿರು ಒಪ್ಪಂದ, ಹವಾಮಾನ ಆರ್ಥಿಕತೆ, ನೀಲಿಸಾಗರ ಆರ್ಥಿಕತೆ, ಪರಿಸರ ಮೇಲೆ ಪ್ಲಾಸ್ಟಿಕ್‍ನಿಂದಾಗುವ ಮಾಲಿನ್ಯ ನಿಯಂತ್ರಣ, ಹವಾಮಾನ ವೈಪರೀತ್ಯ, ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಯೋಜನಗಳನ್ನು ರೂಪಿಸಲಾಗುವುದು ಎಂದರು.
  ಹಂಪಿ ಸ್ಮಾರಕಗಳ ವೈಭವ
ಭಾರತೀಯ ಪುರತತ್ವ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ಹಂಪಿ ಸ್ಮಾರಕಗಳನ್ನು ಸಜ್ಜುಗೊಳಿಸಿದ ರೀತಿ ಅಮೋಘವಾದದು. ಇದರ ಫಲವಾಗಿ ಹಂಪಿ ಸ್ಮಾರಕಗಳು ಅವಿಸ್ಮರಣೀಯ ಅನುಭವ ಜಿ-20 ರಾಷ್ಟ್ರಗಳ ಪ್ರತಿನಿಧಿಗಳ ಮನಸೂರೆಗೊಂಡಿದೆ.
ಜಿ-20 3ನೇ ಶೆರ್ಪಾದ ಸಾಲು ಸಾಲು ಸಭೆಗಳು ಕಮಲಾಪುರದ ಎವಾಲ್ವೋ ಬ್ಯಾಕ್ ರೆಸಾಟ್ರ್ನಲ್ಲಿ ನಡೆಯುತ್ತವೆ. ಈ ಸಭೆಗಳ ಬಿಡುವಿನ ವೇಳೆಯಲ್ಲಿ ಶುಕ್ರವಾರ ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಶೆರ್ಪಾಗಳು ಹಂಪಿಯ ಸ್ಮಾರಕಗಳನ್ನೂ ವೀಕ್ಷಿಸಿದರು. ಚುಮು ಚುಮು ಮಳೆಯಲ್ಲಿ ಐತಿಹಾಸಿಕ ಮಹಾನವಮಿ ದಿಬ್ಬ, ಪುಷ್ಕರಣಿ, ಹಜಾರರಾಮಚಂದ್ರ ದೇವಾಲಯ, ಕಮಲ್ ಮಹಲ್, ಗಜಶಾಲೆ ಕಣ್ತುಂಬಿಕೊಂಡ ಪ್ರತಿನಿಧಿಗಳಿಗೆ, ಸಂಜೆ ಕಣ್ಣು ಕೊರೈಸುವ ದೀಪಾಲಂಕಾರದ ಮಧ್ಯೆ ವಿಜಯವಿಠ್ಠಲ ಮಂದಿರ, ಕಲ್ಲಿನರಥ, ಸಂಗೀತ ಕಂಬಗಳು ಹಂಪಿಯ ಗತ ವೈಭವನ್ನು ಮರುಕಳಿಸಿದವು.
ಹಂಪಿಯ ವಾಸ್ತು ಶಿಲ್ಪಕ್ಕೆ ವಿದೇಶಿ ಪ್ರತಿನಿಧಿಗಳು ಮನಸೋತರು. ಭಾರತೀಯ ಪುರತತ್ವ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ರಾಜ್ಯ ಪ್ರವಾಸೋಧ್ಯಮ ಇಲಾಖೆಯ ಕಾರ್ಯಕ್ಕೆ ಭಾರತೀಯ ಶೆರ್ಪಾ ಅಮಿತಾಬ್ ಕಾಂತ್ ಅಭಿನಂದನೆ ಸಲ್ಲಿಸಿದರು.