
ಬಳ್ಳಾರಿ,ಜು.13- ಭಾರತದ ಜಿ-20ರ ಅಧ್ಯಕ್ಷತೆಯಲ್ಲಿ ಮೂರನೇ ಷರ್ಪಾಗಳ ಸಭೆಯು, ಭಾರತದ ಜಿ-20ರ ಷರ್ಪಾ, ಅಮಿತಾಭ್‍ಕಾಂತ್ ಅವರ ಅಧ್ಯಕ್ಷತೆಯಲ್ಲಿ 2023ರ ಜುಲೈ 13ರಿಂದ 16 ರವರೆಗೆ ಕರ್ನಾಟಕದ ಹಂಪಿಯಲ್ಲಿ ನಡೆಯಲಿದೆ. ಹಂಪಿ ನಗರವು ತುಂಗಭದ್ರ ನದಿ ದಂಡೆಯಲ್ಲಿದ್ದು, ಇದು ವಿಜಯನಗರ ಸಾಮ್ರಾಜ್ಯದ ಕೊನೆಯ ರಾಜಧಾನಿಯಾಗಿತ್ತು. ಹಂಪಿಯು ಸಂಕೀರ್ಣ ವಿನ್ಯಾಸಗಳು ಮತ್ತು ಇತರ ಸ್ಮಾರಕಗಳೊಂದಿಗೆ ಭವ್ಯವಾದ ದ್ರಾವಿಡ ಶೈಲಿಯ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ 3ನೇ ಷರ್ಪಾ ಸಭೆಯಲ್ಲಿ ಆಯಾ ಷರ್ಪಾಗಳು ಮತ್ತು ಜಿ-20ರ ಸದಸ್ಯರು, ಆಹ್ವಾನಿತ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ನಿಯೋಗಗಳ ಮುಖ್ಯಸ್ಥರ ನೇತೃತ್ವದಲ್ಲಿ 120ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಎಲ್ಲಾ ಪ್ರತಿನಿಧಿಗಳು ನಾಯಕರ ಘೋಷಣೆಯ ರಚನೆಯ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ. ಈ ಘೋಷಣೆಗಳನ್ನು ಅಂತಿಮವಾಗಿ ನವದೆಹಲಿಯ ಶೃಂಗಸಭೆಯಲ್ಲಿ ಜಿ-20ರ ನಾಯಕರು ಅಂಗೀಕರಿಸಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಂತರ್ಗತ, ಮಹತ್ವಾಕಾಂಕ್ಷೆಯ, ಕ್ರಿಯಾ ಆಧಾರಿತ ಮತ್ತು ನಿರ್ಣಾಯಕ ಕಾರ್ಯಸೂಚಿಯ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಷರ್ಪಾಗಳು ಭಾರತದ ಅಧ್ಯಕ್ಷತೆಯಲ್ಲಿ ಹಸಿರು ಅಭಿವೃದ್ಧಿ, ಹವಾಮಾನ, ಹಣಕಾಸು, ಮತ್ತು ಪರಿಸರಕ್ಕಾಗಿ ಜೀವನಶೈಲಿ (ಎಲ್.ಐ.ಎಫ್.ಇ); ವೇಗವರ್ಧಿತ, ಅಂತರ್ಗತ ಮತ್ತು ಸ್ಥಿತಿಸ್ಥಾಪಕ ಬೆಳವಣಿಗೆ; ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯನ್ನು ತೀವ್ರಗೊಳಿಸುವುದು; ತಾಂತ್ರಿಕ ರೂಪಾಂತರ ಮತ್ತು ವಿದ್ಯುನ್ಮಾನ ತಂತ್ರಜ್ಞಾನ ಸಾರ್ವಜನಿಕ ಮೂಲಸೌಕರ್ಯ; 21ನೇ ಶತಮಾನದ ಬಹುಪಕ್ಷೀಯ ಸಂಸ್ಥೆಗಳು; ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ಆದ್ಯತೆಗಳನ್ನು ಪ್ರತಿಬಿಂಬಿಸುವ ಪಠ್ಯದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಪ್ರತಿಕ್ರಿಯೆಯ ನಂತರ ಬಂದ ಈ ಆದ್ಯತೆಗಳು ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ವಿವಿಧ ಕಾರ್ಯಪ್ರವಾಹಗಳಲ್ಲಿನ ಚರ್ಚೆಗಳಿಗೆ ಮಾರ್ಗದರ್ಶನ ನೀಡಿವೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಹಗಲಿನಲ್ಲಿ ತೀವ್ರವಾದ ಚರ್ಚೆಗಳಲ್ಲಿ ತೊಡಗಿರುವ ಪ್ರತಿನಿಧಿಗಳಿಗೆ, ಸಂಜೆಯಲ್ಲಿ ಹಂಪಿಯ ಭವ್ಯ ತಾಣವು ನೀಡುವ ಶ್ರೀಮಂತ ಪರಂಪರೆಯ ಸ್ಥಳೀಯ ಪಾಕವನ್ನು ಸವಿಯುತ್ತಾ, ಸ್ಥಳೀಯ ಸಾಂಸ್ಕøತಿಕ ಪ್ರದರ್ಶನದ ಅನುಭವಗಳನ್ನು ಪಡೆಯುವ ಅವಕಾಶವಿದೆ.
4,100 ಹೆಕ್ಟೇರ್ ಪ್ರದೇಶದ ವ್ಯಾಪ್ತಿಯಲ್ಲಿ ತಮ್ಮ ರಾಜರ ಕಥೆಗಳನ್ನು ಹೇಳುವ ಕೋಟೆಗಳು ಮತ್ತು ಪವಿತ್ರ ಸಂಕೀರ್ಣಗಳು, ಹಾಡುವ ಕಂಬಗಳ ಸಭಾಂಗಣಗಳು, ಮಂಟಪಗಳು ಮತ್ತು ಸ್ಮಾರಕಗಳು, ನೀರಿನ ರಚನೆಗಳು ಮತ್ತು ನದಿತೀರಗಳು ಅಂದಿನ ಸುವರ್ಣ ಯುಗಕ್ಕೆ ಸಾಕ್ಷಿಯಾಗಿವೆ. ಈ ಸಭೆಯ ಪ್ರತಿನಿಧಿಗಳು ಹಂಪಿಯ ಐತಿಹಾಸಿಕ ಸ್ಥಳಗಳು ಮತ್ತು ಸ್ಮಾರಕಗಳಾದ ವಿಜಯ ವಿಠ್ಠಲ ದೇವಸ್ಥಾನ, ಯಡೂರು ಬಸವಣ್ಣ ಕಾಂಪ್ಲೆಕ್ಸ್ ಮತ್ತು ವಿರೂಪಾಕ್ಷ ದೇವಾಲಯ, ರಾಯರ ಹಂಪಿ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಲಿದ್ದಾರೆ. ಅವರು ಸ್ಥಳೀಯ ಕುಶಲಕರ್ಮಿಗಳು ಕುಶಲತೆಯಿಂದ ರಚಿಸಿದ ಚೆನ್ನಪಟ್ಟಣದ ಆಟಿಕೆಗಳು, ಕಿನ್ಹಲ್ಲಾ, ಬಿದ್ರಿ, ಗಂಜಿಫಾ ಮುಂತಾದ ಕುಶಲಕಲಾ ವಸ್ತುಗಳ ಅನುಭವ ಪಡೆಯಲಿದ್ದಾರೆ.
16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯನು ನಿರ್ಮಿಸಿದ ಹಂಪಿಯ ವಿಜಯ ವಿಠ್ಠಲ ದೇವಾಲಯದ ಭವ್ಯವಾದ ಕಲ್ಲಿನ ರಥವು ಸಾಮ್ರಾಜ್ಯದ ಸೌಂದರ್ಯ ಮತ್ತು ಕಲಾತ್ಮಕ ಪರಿಪೂರ್ಣತೆಯನ್ನು ಪ್ರತಿನಿಧಿಸುತ್ತದೆ. ಅಪ್ರತಿಮ ಹಂಪಿಯ ಕಲ್ಲಿನ ರಥವು ಭಾರತದ ಐವತ್ತು ರೂಪಾಯಿಯ ನೋಟಿನಲ್ಲಿ ಮಾನ್ಯತೆಯನ್ನು ಪಡೆದಿದ್ದು, ಜಿ-20ರ 3ನೇ ಷರ್ಪಾ ಸಭೆಗೆ ಆಯ್ಕೆ ಮಾಡಿದ ತಾಣವಾಗಿದೆ.