
ಮೋದಿ ಮನದ ಮಾತು
ನವದೆಹಲಿ,ಆ.೨೭- ಭಾರತದ ಜಿ-೨೦ ಅಧ್ಯಕ್ಷತೆ ದೇಶದ ಜನರ ಅಧ್ಯಕ್ಷತೆ ಎಂದು ಕರೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ನಡೆಯಲಿರುವ ಜಿ-೨೦ ಶೃಂಗಸಭೆ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿಯಾಗಲಿದೆ. ಇದಕ್ಕಾಗಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ-೨೦ ನಾಯಕರ ಶೃಂಗಸಭೆಗೆ ಜಗತ್ತಿನ ೪೦ ದೇಶಗಳು ಮತ್ತು ಅನೇಕ ಜಾಗತಿಕ ಸಂಸ್ಥೆಗಳ ಮುಖ್ಯಸ್ಥರು ದೆಹಲಿಗೆ ಬರಲಿದ್ದಾರೆ. ಜಿ-೨೦ ಶೃಂಗಸಭೆಯ ಇತಿಹಾಸದಲ್ಲಿ ಅತಿದೊಡ್ಡ ಪಾಲ್ಗೊಳ್ಳುವಿಕೆಯಾಗಿದ್ದು ಇದರಿಂದಾಗಿ ಭಾರತ ಹೆಚ್ಚು ಮಹತ್ಮ ಪಡೆದುಕೊಂಡಿದೆ.
ಆಕಾಶವಾಣಿಯ ಮನ್ ಕಿ ಬಾತ್ ಸರಣಿಯ ೧೦೪ ನೇ ಸಂಚಿಕೆಯಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಅವರು ಭಾರತ, ಜಿ-೨೦ ಶೃಂಗಸಭೆಯನ್ನು ಹೆಚ್ಚು ಒಳಗೊಳ್ಳುವ ವೇದಿಕೆಯನ್ನಾಗಿ ಮಾಡಿದೆ.ಹೀಗಾಗಿ ಜಗತ್ತಿನ ಚಿತ್ತ ಭಾರತದತ್ತ ನೆಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಜಿ-೨೦ ಅಧ್ಯಕ್ಷತೆ ವಹಿಸಿಕೊಂಡ ನಂತರ ದೇಶದ ವಿವಿಧ ಭಾಗಗಳಲ್ಲಿ ವಿವಿಧ ವಿಷಯಗಳಲ್ಲಿ ಶೃಂಗ ಸಭೆ ನಡೆದಿತ್ತು. ದೆಹಲಿಯಲ್ಲಿ ಮುಂದಿನ ತಿಂಗಳು ಜಿ-೨೦ ಶೃಂಗ ಸಭೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಇದಕ್ಕಾಗಿ ಸರ್ವ ರೀತಿಯಲ್ಲಿ ಸಿದ್ದವಾಗಿರುವುದಾಗಿ ಪ್ರಕಟಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಜಿ- ೨೦ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತ್ತು. ನವೆಂಬರ್ ೧೫ ಮತ್ತು ೧೬ ರಂದು ಇಂಡೋನೇಷ್ಯಾ ಆಯೋಜಿಸಿದ್ದ ಬಾಲಿಯಲ್ಲಿ ಹಿಂದಿನ ಜಿ ೨೦ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ಜಿ- ೨೦ ಅಥವಾ ಗುಂಪು ೨೦ ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಅಂತರಸರ್ಕಾರಿ ವೇದಿಕೆಯಾಗಿದೆ. ಈ ಗುಂಪಿನಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಅಮೇರಿಕಾ, ಇಂಗ್ಲೆಂಡ್ ಮತ್ತು ಯುರೋಪಿಯನ್ ದೇಶಗಳನ್ನು ಒಳಗೊಂಡಿದೆ.
ಪದಗಳು ಸಾಲದು:
ಚಂದ್ರಯಾನ-೩ ಸಾಧಿಸಿದ ಯಶಸ್ಸು ದೊಡ್ಡದು, ಮಾತುಗಳು ವರ್ಣಿಸಲು ಸಾಕಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದು ಅವರು ಹೇಳಿದ್ದಾರೆ.
ಚಂದ್ರಯಾನ-೩ರ ಯಶಸ್ಸಿನಲ್ಲಿ ನಮ್ಮ ವಿಜ್ಞಾನಿಗಳ ಜೊತೆಗೆ ಹಲವರು ಭಾಗಿಯಾಗಿದ್ದಾರೆ .ಭಾರತವನ್ನು ಮುಂದೆ ಕೊಂಡೊಯ್ಯುವಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ ಅಳವಡಿಸಿಕೊಳ್ಳಬೇಕಾಗಿದೆ. ಅದಕ್ಕೆ ತಾಜಾ ಉದಾಹರಣ ಎಂದರೆ ಚಂದ್ರಯಾನ ಮಿಷನ್‌ನಲ್ಲಿ ಹಲವಾರು ಮಹಿಳೆಯರು ವಿವಿಧ ಹಂತಗಳಲ್ಲಿ ಭಾಗಿಯಾಗಿ ಯಶಸ್ಸು ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನವ ಭಾರತದ ಸಂಕೇತ:
ಚಂದ್ರಯಾನ-೩ ಯಶಸ್ವಿ ನವ ಭಾರತದ ಆತ್ಮದ ಸಂಕೇತವಾಗಿದೆ, ಎಲ್ಲಾ ಸಂದರ್ಭಗಳಲ್ಲಿಯೂ ಗೆಲ್ಲಲು ಬಯಸುತ್ತದೆ ಮತ್ತು ಯಾವುದೇ ಪರಿಸ್ಥಿತಿಯಲ್ಲಿ ಹೇಗೆ ಗೆಲ್ಲಬೇಕೆಂದು ತಿಳಿ ಹೇಳಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
“ಚಂದ್ರಯಾನ-೩ ರ ಯಶಸ್ಸು ಹಲವು ದಾಖಲೆಯ ಪುಟ ಸೇರಿದೆ. ಚಂದ್ರಯಾನ -೩ ಚಂದ್ರನ ಮೇಲ್ಮೈಗೆ ಇಳಿದು ಮೂರು ದಿನಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಈ ಯಶಸ್ಸು ಎಷ್ಟು ದೊಡ್ಡದೆಂದರೆ ಅದರ ಬಗ್ಗೆ ಯಾವುದೇ ಚರ್ಚೆ ಕಡಿಮೆ ಎಂದು ತೋರುತ್ತದೆ ಎಂದು ತಿಳಿಸಿದ್ದಾರೆ.
ಮಹಿಳಾ ಶಕ್ತಿಗೆ ಉದಾಹರಣೆ
ಚಂದ್ರಯಾನ-೩ ಮಹಿಳಾ ಶಕ್ತಿಗೆ ಜೀವಂತ ಉದಾಹರಣೆಯಾಗಿದೆ ಎಂದು ಹೇಳಿದ ಪ್ರಧಾನಿ ಮೋದಿ, ಹಲವಾರು ಮಹಿಳಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ನೇರವಾಗಿ ಮಿಷನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಂದು ದೇಶದ ಹೆಣ್ಣುಮಕ್ಕಳು ಇಷ್ಟೊಂದು ಮಹತ್ವಾಕಾಂಕ್ಷಿಗಳಾದರೆ ಆ ದೇಶ ಅಭಿವೃದ್ಧಿಯಾಗುವುದನ್ನು ತಡೆಯಲು ಯಾರಿಂದ ಸಾಧ್ಯವಿಲ್ಲ ಎಂದ ಅವರು ಅಸಾದ್ಯವಾದುದನ್ನು ಸಾದ್ಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಮಿಷನ್ ಚಂದ್ರಯಾನ ‘ಹೊಸ ಭಾರತ’ದ ಚೈತನ್ಯದ ಸಂಕೇತವಾಗಿದೆ, ಮಹಿಳಾ ಶಕ್ತಿಯ ಸಾಮರ್ಥ್ಯವನ್ನು ಸೇರಿದಾ ಅಸಾಧ್ಯವಾದದ್ದು ಸಾಧ್ಯ” ಎಂದು ಅವರು ಹೇಳಿದ್ದಾರೆ.