ಜಿ.೨೦ ಶೃಂಗ ಸಭೆಗೆ ಪುಟೀನ್ ಭಾಗಿ ಸಾಧ್ಯತೆ

ನವದೆಹಲಿ,ಮಾ.೧೪- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟಂಬರ್ ನಲ್ಲಿ ನಡೆಯಲಿರುವ ಜಿ -೨೦ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಜಿ- ೨೦ ನಾಯಕರ ಶೃಂಗಸಭೆ ದೆಹಲಿಯಲ್ಲಿ ಸೆಪ್ಟೆಂಬರ್ ೯ ಮತ್ತು ೧೦ ರಂದು ನಡೆಯಲಿದ್ದು ವ್ಲಾಡಿಮಿರ್ ಪುಟಿನ್ ಭಾಗವಹಿಸುವ ನಿರೀಕ್ಷೆ ಹೆಚ್ಚಾಗಿದೆ .ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಜಿ-೨೦ ಶೃಂಗಸಭೆಯಲ್ಲಿ ಪುಟಿನ್ ಭಾಗವಹಿಸುವಿಕೆ ತಳ್ಳಿಹಾಕಲಾಗುವುದಿಲ್ಲ” ಎಂದು ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

“ಜಿ ೨೦ ಶೃಂಗಸಭೆಯಲ್ಲಿ ರಷ್ಯಾ ಸಂಪೂರ್ಣ ಭಾಗವಹಿಸುವಿಕೆ ಮುಂದುವರೆಸಿದೆ, ಕಳೆದ ವರ್ಷ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ ೨೦ ನಾಯಕರ ವೇದಿಕೆಯಲ್ಲಿ ರಷ್ಯಾದ ನಿಯೋಗ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ನೇತೃತ್ವದಲ್ಲಿ ಭಾಗವಹಿಸಿತ್ತು. ೨೦೨೦ ಮತ್ತು ೨೦೨೧ ರಲ್ಲಿ ಪುಟಿನ್ ವೀಡಿಯೊ ಲಿಂಕ್ ಮೂಲಕ ಜಿ-೨೦ ಶೃಂಗಸಭೆಗಳಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ಜಿ-೨೦ ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಅಂತರ ಸರ್ಕಾರಿ ವೇದಿಕೆಯಾಗಿದೆ. ಸದಸ್ಯರು ಜಾಗತಿಕ ಜಿಡಿಪಿಯ ಸುಮಾರು ೮೫ ಪ್ರತಿಶತ ಪ್ರತಿನಿಧಿಸುತ್ತಾರೆ, ಜಾಗತಿಕ ವ್ಯಾಪಾರದ ಶೇಕಡಾ ೭೫ ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಪ್ರತಿನಿಧಿಸುತ್ತಾರೆ.

ಈ ಗುಂಪಿನಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ದೇಶಗಳನ್ನು ಒಳಗೊಂಡಿದೆ.

ಉಕ್ರೇನ್ ಸಂಘರ್ಷದ ಕುರಿತು ಅಮೇರಿಕಾ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳು ಮತ್ತು ರಷ್ಯಾದ ನಡುವೆ ತೀವ್ರವಾಗಿ ಹೆಚ್ಚುತ್ತಿರುವ ಬಿರುಕುಗಳಿಂದಾಗಿ ಜಿ- ೨೦ ವಿದೇಶಾಂಗ ಸಚಿವರ ಸಭೆ ಜಂಟಿ ಸಂವಹನದೊಂದಿಗೆ ಹೊರಬರಲು ಸಾಧ್ಯವಾಗಲಿಲ್ಲ.