ಜಿ. ವೆಂಕಟಸುಬ್ಬಯ್ಯ, ಅಲ್ದಾಳರು ಮರೆಯಲಾಗದ ಮಹಾನುಭಾವರು: ಡಾ. ಸತ್ಯಂಪೇಟೆ

ಕಲಬುರಗಿ.ಏ.20: ಶಬ್ದ ಸಹಾಯವಾಣಿ ಎಂದೇ ಪ್ರಖ್ಯಾತರಾಗಿದ್ದ ಜಿ. ವೆಂಕಟಸುಬ್ಬಯ್ಯ ಹಾಗೂ ನಾಟಕದ ಮಾಸ್ತರ್ ಎಂದೇ ಖ್ಯಾತನಾಮರಾಗಿದ್ದ ಎಲ್.ಬಿ.ಕೆ. ಅಲ್ದಾಳ್ ಅವರ ನಿಧನದಿಂದಾಗಿ ಕನ್ನಡ ಸಾರಸತ್ವ ಲೋಕ ಬಡವಾಗಿದೆ ಎಂದು ಪತ್ರಕರ್ತ, ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಅವರು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ) ವತಿಯಿಂದ ನಗರದ ಸರ್ವಜ್ಞ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಜಿ.ವಿ. ಹಾಗೂ ಎಲ್‍ಬಿಕೆ ಅವರ ಕುರಿತು ಮಾತನಾಡಿದ ಅವರು, ಸಾಧಕರ ಬದುಕು ನಮ್ಮದಾಗಬೇಕು ಎಂದು ಕರೆ ನೀಡಿದರು.
ಗುಂಜಾಮ್ ವೆಂಕಟಸುಬ್ಬಯ್ಯ ಹಾಗೂ ಲಾಲ್ ಮೊಹ್ಮದ್ ಬಂದೇನವಾಜ್ ಖಲೀಫ್ ಅವರು ಪದಕೋಶ ಹಾಗೂ ನಾಟಕ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದ ಸೇವೆ ಸಲ್ಲಿಸಿದ್ದರಿಂದಲೇ ಅವರನ್ನು ಇಂದು ಸ್ಮರಿಸಲಾಗುತ್ತಿದ್ದು, ಇಬ್ಬರೂ ಮಹನೀಯರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕಕ್ಕೆ ಮಹದುಪಕಾರ ಮಾಡಿದ್ದಾರೆ ಎಂದು ಅವರು ಹೇಳಿದರು.
ಅಪರಿಮಿತ ಜೀವನೋತ್ಸಾಹ, ಓದು, ಬರಹವನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡ ಈ ಮಹನೀಯರು, ಮರೆಯಲಾಗದ ಮಹಾನುಭವರು ಎಂದು ಅವರ ವ್ಯಕ್ತಿತ್ವವನ್ನು ಸತ್ಯಂಪೇಟೆ ಅವರು ಬಣ್ಣಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ್ ಅವರು ಮಾತನಾಡಿ, ಸಾಧಕರು ಯಾವೊತ್ತೂ ಮಾತನಾಡುವುದಿಲ್ಲ. ಅವರ ಸಾಧನೆಗಳೇ ಮಾತನಾಡುತ್ತವೆ ಎನ್ನುವಂತೆ ನಮ್ಮಿಂದ ಅಗಲಿದ ಅವರು ಲೋಕ ಇರುವವರೆಗೆ ಅಜರಾಮರವಾಗಿರುತ್ತಾರೆ ಎಂದರು.
ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಈ ದಿನಮಾನಗಳಲ್ಲಿ ದೈಹಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಧರಿಸುವ ಮೂಲಕ ಕೊರೋನಾ ಮಹಾಮಾರಿಯಿಂದ ಪಾರಾಗಬೇಕು ಎಂದು ಅವರು ಹೇಳಿದರು. ಪ್ರಿನ್ಸಿಪಾಲ್ ಪ್ರೊ. ಎಂ.ಸಿ. ಕಿರೇದಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ್ ನಾಲವಾರಕರ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾವತಿ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.